ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು, ಪರಪು ಹಳೆ ವಿದ್ಯಾರ್ಥಿ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ‘ಪಗೆಲಿಡೀ ಪದ್ರಾಡ್ ಮುಡಿ’ಯ ಸಮಾರೋಪ ಸಮಾರಂಭವು ದಿನಾಂಕ 20 ಜುಲೈ 2025ರ ಆದಿತ್ಯವಾರದಂದು ನಡೆಯಿತು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿರುವ ಶ್ರೀ ಅಚ್ಚುತ ಗಟ್ಟಿ “ತುಳುವರು ತುಳು ಸಂಸ್ಕೃತಿಯನ್ನು ಮರೆಯುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣ. ತುಳುಭಾಷೆ, ತುಳು ಸಂಸ್ಕೃತಿ, ತುಳು ಸಂಸ್ಕಾರಗಳನ್ನು ಉಳಿಸುವಲ್ಲಿ ನಮ್ಮೆಲ್ಲರ ಜಬಾಬ್ದಾರಿಯಿದೆ. ಮಕ್ಕಳಿಗೆ ದೈವಾರಾಧನೆ, ಕೃಷಿಗೆ ಸಂಬoಧಿಸಿದ ಪರಿಕರಗಳನ್ನು ಪರಿಚಯಿಸುವ ಅಗತ್ಯವಿದೆ. ಮೌಲ್ಯಾಧಾರಿತ ಶಿಕ್ಷಣದ ಮೂಲ️ಕ ಮಕ್ಕಳು ತುಳು ಸಂಸ್ಕೃತಿಯನ್ನು ಅರಿಯಬೇಕಾಗಿದೆ” ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠದ ಸಂಯೋಜಕರಾದ ಡಾ. ಮಾಧವ ಎಂ.ಕೆ. “ತುಳು ಸಂಸ್ಕೃತಿ, ಸಂಸ್ಕಾರ ಮನೆಯಿಂದಲೇ ಆರಂಭವಾಗಬೇಕು. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅವರಿಗೆ ಎಳವೆಯಲ್ಲಿಯೇ ಸಂಸ್ಕಾರಗಳನ್ನು ಮನವರಿಕೆ ಮಾಡಿಕೊಡಬೇಕು. ಮಕ್ಕಳ ಹೆತ್ತವರು, ಪೋಷಕರು ಈ ನಿಟ್ಟಿನಲ್ಲಿ ವಹಿಸಬೇಕಾದ ಕಾಳಜಿ ಅತ್ಯಂತ ಮಹತ್ವದ್ದು” ಎಂದು ಅಭಿಪ್ರಾಯಪಟ್ಟರು.
ಕುರ್ನಾಡು ಪದ್ರಾಡ್‌ಮುಡಿಯ ಆದಿಬ್ರಹ್ಮ ನಾಗಬ್ರಹ್ಮ ದೇವಸ್ಥಾನದ ಪಾತ್ರಿಗಳಾದ ರಮೇಶ್ ಕುಮಾರ್ ವಿಶೇಷ ಅತಿಥಿಗಳಾಗಿ ಮಾತನಾಡಿ,ಆಧುನಿಕ ಯುಗದಲ್ಲಿ ತುಳು ಸಂಸ್ಕೃತಿಯನ್ನು ಕೃಷಿಸಂಸ್ಕೃತಿಯನ್ನು ಉಳಿಸುವಲ್ಲಿ ಇಂತಹ ಕಾರ್ಯಕ್ರಮಗಳು ಅಪೇಕ್ಷಣೀಯ ಎಂದು ಸಂತಸ ವ್ಯಕ್ತಪಡಿಸಿದರು.
ಬಳಿಕ ‘ಪಗೆಲಿಡೀ ಪದ್ರಾಡ್‌ಮುಡಿ’ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಊರಿನ ಮಕ್ಕಳು, ಯುವಕರು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ನಿತಿನ್-ತುಳಸಿ ಗಟ್ಟಿ, ಕಿರಣ್-ನೀತಾ ಗಟ್ಟಿ ಮತ್ತು ಮನೆಯವರು ಸಹಕರಿಸಿದರು. ಶ್ರೀಮತಿ ಸಂಧ್ಯಾ ಆಳ್ವ ಸ್ವಾಗತಿಸಿ, ಶ್ರೀ ಪ್ರಸಾದ್ ಅಂಚನ್ ನಿರೂಪಿಸಿದರು.