ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಇದರ ಸಹಯೋಗದಲ್ಲಿ ‘ಭೀಷ್ಮ ಭಾರತ’ ತಾಳಮದ್ದಳೆ ಸಪ್ತಾಹ ದಿನಾಂಕ 25 ಜುಲೈ 2025ರಂದು ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಳದಲ್ಲಿ ಉದ್ಘಾಟನೆಗೊಂಡಿತು.
ದೀಪ ಬೆಳಗಿಸಿ ಸಪ್ತಾಹಕ್ಕೆ ಚಾಲನೆ ನೀಡಿದ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರೂ ಆದ ಮೇಗಿನಗುತ್ತು ಶಿವನಾಥ ರೈ ಕಾರ್ಯಕ್ರಮಕ್ಕೆ ಶುಭ ಕೋರಿದರು. ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ ಸಪ್ತಾಹದ ಯಶಸ್ಸಿಗೆ ಎಲ್ಲರೂ ಸಹಕಾರ ಬೇಕು ಎಂದರು. ಡಾ. ಸೀತಾರಾಮ ಭಟ್, ವ್ಯವಸ್ಥಾಪಕರು ಶ್ರೀ ರಾಘವೇಂದ್ರ ಮಠ ಕಲ್ಲಮೆ ಹಾಗೂ ಸರ್ವೆ ಶ್ರೀ ದೇವಳದ ಅರ್ಚಕ ಶ್ರೀ ರಾಮ ಕಲ್ಲೂರಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹರಿಣಾಕ್ಷಿ ಜೆ. ಶೆಟ್ಟಿ ಹಾಗೂ ಆನಂದ ಸವಣೂರು ಅತಿಥಿಗಳಿಗೆ ಶಾಲು ಹೊದಿಸಿ ಗೌರವಿಸಿದರು. ಸಂಘದ ಹಿರಿಯ ಕಲಾವಿದ ಗುಂಡ್ಯಡ್ಕ ಈಶ್ವರ ಭಟ್ ಅಗಲಿದ ಹಿರಿಯ ಕಲಾವಿದರಿಗೆ ನುಡಿ ನಮನ ಸಲ್ಲಿಸಿದರು. ಗುಡ್ಡಪ್ಪ ಬಲ್ಯ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮೀ ವಿ.ಜಿ. ಭಟ್ ಪ್ರಾರ್ಥಿಸಿದರು. ವೇದಿಕೆಯಲ್ಲಿ ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷೆ ಪ್ರೇಮಲತಾ ರಾವ್ ಉಪಸ್ಥಿತರಿದ್ದರು. ಭಾಸ್ಕರ ಶೆಟ್ಟಿ ಸಾಲ್ಮರ ಸ್ವಾಗತಿಸಿ, ಅಚ್ಯುತ ಪಾಂಗಣ್ಣಾಯ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ‘ಗಾಂಗೇಯ’ ಎಂಬ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಚೆಂಡೆಗುಳಿ ನರಸಿಂಹ ಶಾಸ್ತ್ರಿ, ನಿತೀಶ್ ಕುಮಾರ್ ಎಂಕಣ್ಢ ಮೂಲೆ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಟಿ.ಡಿ. ಗೋಪಾಲಕೃಷ್ಣ ಸಹಕರಿಸಿದರು. ಮುಮ್ಮೇಳದಲ್ಲಿ ಮೋಹನ ಕಲ್ಲೂರಾಯ (ಗಂಗೆ), ಗಣರಾಜ್ ಕುಂಬ್ಳೆ (ಶಂತನು), ಭಾಸ್ಕರ ಶೆಟ್ಟಿ ಸಾಲ್ಮರ (ಬ್ರಹ್ಮ), ದಿವಾಕರ ಆಚಾರ್ಯ ನೇರಂಕಿ (ಮಹಾಭಿಷ), ರಾಮಚಂದ್ರ ಭಟ್ ದೇವರಗಂಡಿ ಮತ್ತು ಲಕ್ಷ್ಮಿ ವಿ.ಜಿ. ಭಟ್ (ವಸುಗಳು) ಸಹಕರಿಸಿದರು.