ಬೆಂಗಳೂರು : ಕರ್ನಾಟಕ ರಂಗ ಪರಿಷತ್ತು ಕೇಂದ್ರ ಸಮಿತಿ ಬೆಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ವತಿಯಿಂದ ಮಂಡ್ಯ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದ ಪ್ರೊ. ಜಯಪ್ರಕಾಶ್ ಗೌಡ ಇವರಿಗೆ ‘ಜೆ.ಪಿ. ಅಭಿನಂದನೆ’ ಕಾರ್ಯಕ್ರಮವನ್ನು ದಿನಾಂಕ 31 ಜುಲೈ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಕನ್ನಡ ಭವನದ ನಯನ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಚಾಮರಾಜನಗರದ ಸಿ.ಎಂ. ನರಸಿಂಹ ಮೂರ್ತಿ ಮತ್ತು ಸಂಗಡಿಗರ ಗಾಯನದೊಂದಿಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಹಿರಿಯ ರಂಗ ಸಂಘಟಕ ಶ್ರೀನಿವಾಸ್ ಜಿ. ಕಪ್ಪಣ್ಣ ಹಾಗೂ ಹಿರಿಯ ನಾಟಕಕಾರರಾದ ಡಾ. ಚಂದ್ರು ಕಾಳೇನಹಳ್ಳಿ ಇವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಗಂಟೆ 7-15ಕ್ಕೆ ಬೆಂಗಳೂರು ಏಷಿಯನ್ ಥಿಯೇಟರ್ ಅಭಿನಯಿಸುವ ಸಿದ್ಧರಾಮ ಕೊಪ್ಪರ್ ಇವರ ನಿರ್ದೇಶನದಲ್ಲಿ ‘ನೀಗಿಕೊಂಡ ಸಂಸ’ ನಾಟಕ ಪ್ರದರ್ಶನಗೊಳ್ಳಲಿದ್ದು, ರಂಗಸ್ವಾಮಿ ಕೆ. ಇವರು ಅಭಿನಯಿಸಲಿದ್ದಾರೆ.