ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಭರತನಾಟ್ಯ ಸಂಸ್ಥೆಗಳಾದ ಪಾರ್ವತಿ ನೃತ್ಯ ವಿಹಂಗಮ (ರಿ.) ಇದರ ನೃತ್ಯ ನಿರ್ದೇಶಕರಾದ ಗುರು ನಿರ್ಮಲಾ ಜಗದೀಶ್ ಹಾಗೂ ನೃತ್ಯ ಕುಟೀರ (ರಿ.) ನೃತ್ಯ ಸಂಸ್ಥೆಯ ನಿರ್ದೇಶಕರಾದ ಗುರು ದೀಪಾ ಭಟ್ ಇವರುಗಳು ಜಂಟಿಯಾಗಿ 2023 ಏಪ್ರಿಲ್ ತಿಂಗಳ 15 ಮತ್ತು 16ರಂದು ಎರಡು ದಿನಗಳ ಕಾಲ ಹಮ್ಮಿಕೊಂಡ ತಾಳ ಕಾರ್ಯಾಗಾರದಲ್ಲಿ ನೃತ್ಯ ಕಲಾವಿದ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಈ ತಾಳ ಕಾರ್ಯಾಗಾರವನ್ನು ಪಾರ್ವತಿ ನೃತ್ಯ ವಿಹಂಗಮ ಮತ್ತು ನೃತ್ಯ ಕುಟೀರ ಸಂಸ್ಥೆಯ ಜೂನಿಯರ್ ಹಾಗೂ ಸೀನಿಯರ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದು, ಸುಮಾರು 56 ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದರು.
ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರು ತಮ್ಮ 6ನೇ ವಯಸ್ಸಿನಲ್ಲಿಯೇ ಭರತನಾಟ್ಯದ ಅಭ್ಯಾಸವನ್ನು ಆರಂಭಿಸಿದ್ದು, ನೃತ್ಯಕ್ಕಾಗಿಯೇ ತಮ್ಮನ್ನು ತೊಡಗಿಸಿಕೊಂಡವರು. 2013ರಲ್ಲಿ ವಿದ್ವಾನ್ ಸುದರ್ಶನ ಎಂ.ಎಲ್. ಭಟ್ ಅವರ ಮಾರ್ಗದರ್ಶನದಲ್ಲಿ ವಿದ್ವತ್ ಪರೀಕ್ಷೆ ತೇರ್ಗಡೆಗೊಂಡಿದ್ದಾರೆ. ಉಪ್ಪಿನಂಗಡಿ ಮತ್ತು ಕಲಬುರುಗಿಯ ಶ್ರೀ ಮಂಜುನಾಥ ನೃತ್ಯ ಕಲಾ ಶಾಲೆಯ ನಿರ್ದೇಶಕರಾದ ಇವರು ಯಕ್ಷಗಾನ ಮತ್ತು ಸುಗಮ ಸಂಗೀತ ಕಲಾವಿದರಾಗಿದ್ದಾರೆ. ‘ತಾಳ ಪ್ರವೀಣ’ ಎಂಬ ಬಿರುದು ಪಡೆದ ಇವರು ದೇಶ ವಿದೇಶಗಳಲ್ಲಿ ತಮ್ಮ ಭರತನಾಟ್ಯ ಪ್ರದರ್ಶನ ನೀಡಿದ್ದು, ಭರತನಾಟ್ಯದಲ್ಲಿ ‘ತಾಳಾವಧಾನ’ ಎಂಬ ವಿಷಯದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ ಸಾಧಕರಾಗಿದ್ದಾರೆ.