ಮೈಸೂರು : ಪರಿವರ್ತನ ರಂಗ ಸಮಾಜ (ರಿ.) ಇದರ 25ನೇ ವರ್ಷಾಚರಣೆಯ ಸಂದರ್ಭದಲ್ಲಿ ಪ್ರಸ್ತುತಪಡಿಸುವ ತಂಡದ 30ನೇ ನಾಟಕ ರವೀಂದ್ರ ಭಟ್ ಇವರ ಕೃತಿ ಆಧಾರಿತ ‘ಮೂರನೇ ಕಿವಿ’ ನಾಟಕ ಪ್ರದರ್ಶನವನ್ನು ದಿನಾಂಕ 02 ಮತ್ತು 03 ಆಗಸ್ಟ್ 2025ರಂದು ಸಂಜೆ 7-00 ಗಂಟೆಗೆ ಮೈಸೂರಿನ ಕಿರುರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಪ್ರೊ. ಎಸ್.ಆರ್. ರಮೇಶ್ ಇವರು ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ನಮನ ಕಲಾ ವೇದಿಕೆಯ ಸಹಕಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಮಾತು ಬಾರದಿರುವ ಪ್ರಪಂಚದಲ್ಲಿ ಶಬ್ದ ಮತ್ತು ಮಾತಿಗೆ ಅಗಾಧವಾದ ಪ್ರಾಮುಖ್ಯತೆ ಇದೆ. ಹುಟ್ಟಿನಿಂದಲೇ ಕಿವುಡರಾದವರಿಗೆ ಮಾತನಾಡುವುದನ್ನು ಕಲಿಸಲು ನಡೆಸುವ ದೀರ್ಘ ಪ್ರಯತ್ನವೇ ಮೂರನೇ ಕಿವಿ ಕೃತಿಯ ಪ್ರಮುಖ ಉದ್ದೇಶ. ಮಾತು ಕಲಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ವಿಜ್ಞಾನವಿದೆ. ಕಲಿಕಾ ಅಭ್ಯಾಸಗಳಿವೆ. ನಿತ್ಯ ನಡೆಸುವ ಹೋರಾಟವಿದೆ. ಉತ್ಸಾಹವಿದೆ. ನಿರಾಶೆ, ಬೇಗುದಿ, ಆಶ್ಚರ್ಯ, ಕುತೂಹಲ ಎಲ್ಲವನ್ನು ಒಳಗೊಳ್ಳುವ ಸಾಹಸ ಹೋರಾಟವಿದು. ತಾಯಿ ಮಗ ಜೊತೆಯಲ್ಲಿ ನಡೆಸುವ ಈ ಕಠಿಣ ಹೋರಾಟದಲ್ಲಿ ಬೆಂಬಲವಾಗಿ ತಂದೆ ಮತ್ತು ಇತರ ಕುಟುಂಬದ ಸದಸ್ಯರು, ಶಾಲೆಯಲ್ಲಿನ ಶಿಕ್ಷಕಿಯರು, ವೈದ್ಯರು, ಮಿತ್ರರು ಎಲ್ಲರೂ ಪಾಲ್ಗೊಳ್ಳುತ್ತಾರೆ. ಒಟ್ಟಾರೆ ಇದು ಸಮುದಾಯದ ಪ್ರಯತ್ನವಾಗಿ ತೋರುತ್ತದೆ.