ಮಂಗಳೂರು : ಸ್ಥಳೀಯ ಲೆಕ್ಕಪತ್ರ ಪರಿಶೋಧಕ ಎಸ್.ಎಸ್. ನಾಯಕ್ ಅವರ ಕಛೇರಿ ಸಭಾಭವನದಲ್ಲಿ ನಿವೃತ್ತ ಅರಣ್ಯಧಿಕಾರಿ ಲಕ್ಷ್ಮಣ ಮೂರ್ತಿಯವರು ಬರೆದ ‘ರಾಣಿ ಅಬ್ಬಕ್ಕದೇವಿ ಜತೆ ಪಯಣ’ ಕೃತಿಯ ಏಳನೇ ಮುದ್ರಣದ ಲೋಕಾರ್ಪಣೆಯು ದಿನಾಂಕ 30 ಜುಲೈ 2025ರಂದು ವಿಜೃಂಭಣೆಯಿಂದ ನಡೆಯಿತು.
ಸಿ.ಎ. ಎಸ್.ಎಸ್. ನಾಯಕ್ ಇವರು ಅಧ್ಯಕ್ಷತೆಯನ್ನು ವಹಿಸಿದ್ದ ಈ ಕಾರ್ಯಕ್ರಮವನ್ನು ದೇಶ ವಿದೇಶ ಖ್ಯಾತಿಯ ಸಿ.ಎ. ಗೋಕುಲದಾಸ ಪೈ ಉದ್ಘಾಟಿಸಿ “ನಮ್ಮ ನೆರೆಯವರೇ ಆದ ಸಾಧರನ್ನು ನಾವು ಅರಿತಿರುವುದಿಲ್ಲ. ಬದಲಾಗಿ ದೂರದ ವಿದೇಶೀಯವರ ಸುದೀರ್ಘ ಅಧ್ಯಯನ ಮಾಡುತ್ತೇವೆ. ಈ ಸಂಕಲನವು ನಮ್ಮ ನಾಡಿನ ಪ್ರಥಮ ಸಾಹಸಿ ಮಹಿಳೆಯ ವ್ಯಕ್ತಿ ಚಿತ್ರಣ ಅಧ್ಯಯನ ಯೋಗ್ಯ” ಎಂದು ಹೇಳಿದರು.
ಅನಂತರ ಎಸ್.ಎಸ್. ನಾಯಕರು ಲಕ್ಷ್ಮಣ ಮೂರ್ತಿಯವರ ನಿವೃತ್ತಿಯ ನಂತರದ ಪ್ರವೃತ್ತಿಯ ಓಘವನ್ನು ವರ್ಣಿಸುತ್ತಾ ಸುಭಾಶಿತ ಹಾಗೂ ಸ್ವರಚಿತ ಚುಟುಕು ಸಹಿತ ಗುಣಗಾನ ಮಾಡಿದರು. ಇನ್ನೋರ್ವ ಮುಖ್ಯ ಅತಿಥಿ ಡಾ. ರಾಜೇಶ ನಾಯಕ್ ರವರು ಅಬ್ಬಕ್ಕನ ಪ್ರಾಮುಖ್ಯತೆಯನ್ನು ಸವಿವರವಾಗಿ ವರ್ಣಿಸಿದರು. ಲೇಖಕ ಕೆ.ವಿ. ಲಕ್ಷ್ಮಣ ಮೂರ್ತಿಯವರು ರಾಣಿ ಅಬ್ಬಕ್ಕ ದೇವಿಯ ಇತಿಹಾಸ ತಿಳಿಯಲು ಮಾಡಿದ ಸಂಶೋಧನೆಯ ಸಾಹಸ ಗಾಥೆಯನ್ನು ವರ್ಣಿಸಿದರು.
ಇದೇ ವೇಳೆ ಎಸ್.ಎಸ್. ನಾಯಕರು ಲಕ್ಷ್ಮಣ ಮೂರ್ತಿಯವರನ್ನು ಹಾರ, ಶಾಲು ಹೊದೆಸಿ ಸನ್ಮಾನಿಸಿ ಅತಿ ಸುಂದರ ತಿರುಪತಿ ತಿಮ್ಮಪ್ಪನ ವರ್ಣಚಿತ್ರವನ್ನು ನೀಡಿ ಗೌರವಿಸಿದರು. ಕಣಚೂರಿನ ಆಯುರ್ವೇದ ವೈದ್ಯಕೀಯ ಕಾಲೇಜಿನ ನಿರ್ದೇಶಕ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿಯವರು ಲಕ್ಷ್ಮಣ ಮೂರ್ತಿಯವರು ಬರೆದ ಹಲವಾರು ಪುಸ್ತಕಗಳನ್ನು ಪ್ರಸ್ತಾಪಿಸಿ ತನ್ನ ಸಂಪಾದಕತ್ವದ ಆರೋಗ್ಯ ರಸಾಯನ ಕವನ ಸಂಲನ ಸಹ ಬಿಡುಗಡೆಯಾಗುವ ಕುರಿತು ಉಲ್ಲೇಖಿಸಿದರು. ಜಯಶ್ರೀ, ಜೋಷಿ, ಉಮೇಶ ಪ್ರಭು, ಕೊಳ್ಚಪ್ಪೆ ಗೋವಿಂದ ಭಟ್, ಕಲ್ಲಚ್ಚು ಮಹೇಶ್ ನಾಯಕ್ ಸಹಿತ ಹಲವರು ಸಮಯೋಚಿತವಾಗಿ ಮಾತನಾಡಿದರು. ಡಾ. ರಾಜೇಶ್ ನಾಯಕರು ಅರಣ್ಯ ಸಂಬಂಧೀ ಕರೋಕೆ ಗಾಯನ ಮಾಡಿದರು. ದೀಕ್ಷಾ ಶಾನುಭಾಗರವರು ನಿರೂಪಣೆ ಹಾಗೂ ಧನ್ಯವಾದ ಸಮರ್ಪಿಸಿದರು.