ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಈ ವರ್ಷ ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 94 ಶಾಲೆಗಳಲ್ಲಿ ಯಕ್ಷಶಿಕ್ಷಣ ನೀಡುತ್ತಿದ್ದು, ಸರಕಾರಿ ಬಾಲಕಿಯರ ಪ್ರೌಢಶಾಲೆಯ ಯಕ್ಷಗಾನ ತರಗತಿಗಳ ಉದ್ಘಾಟನೆಯು ದಿನಾಂಕ 01 ಆಗಸ್ಟ್ 2025ರಂದು ಶಾಲೆಯ ಸಭಾಭವನದಲ್ಲಿ ಜರಗಿತು.
ಟ್ರಸ್ಟಿನ ಅಧ್ಯಕ್ಷರೂ, ಉಡುಪಿಯ ಶಾಸಕರೂ ಆದ ಯಶ್ ಪಾಲ್ ಎ. ಸುವರ್ಣ ಜ್ಯೋತಿ ಬೆಳಗಿಸಿ “ಯಕ್ಷಗಾನ ಕಲಾರಂಗದ ಸಹಕಾರದಿಂದ ಈ ಮಹಾಭಿಯಾನ ಯಶಸ್ವಿಯಾಗಿ ಮುಂದುವರೆಯುತ್ತಿದೆ” ಎಂದು ಹೇಳಿದರು. ಟ್ರಸ್ಟಿನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ “ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾದ ಈ ಕಾರ್ಯಕ್ರಮ ಕಳೆದ 18 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ” ಎಂದರು. ದಾನಿ ಡಾ. ಬಿ.ಜಿ. ಆಚಾರ್ಯರು ಬಾಲ್ಯದಲ್ಲಿ ಯಕ್ಷಗಾನ ತನ್ನ ಮೇಲೆ ಬೀರಿದ ಪ್ರಭಾವವನ್ನು ನೆನಪಿಕೊಂಡರು. ಎಸ್.ಡಿ.ಎಂ.ಸಿ. ಗೌರವಾಧ್ಯಕ್ಷೆ ತಾರಾದೇವಿ, ಟ್ರಸ್ಟಿಗಳಾದ ನಾರಾಯಣ ಎಂ. ಹೆಗಡೆ, ಮೀನಾಲಕ್ಷಣಿ ಅಡ್ಯಂತಾಯ, ಯಕ್ಷಗಾನ ಗುರುಗಳಾದ ನಿರಂಜನ್ ಭಟ್, ಆದ್ಯತಾ ಭಟ್, ಎಸ್.ಡಿ.ಎಂ.ಸಿ. ಅಧ್ಯಕ್ಷೆ ನವ್ಯಾ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ಯಕ್ಷಗಾನ ವಿದ್ಯಾರ್ಥಿಗಳಿಂದ ಗಣಪತಿ ಸ್ತುತಿ ನೃತ್ಯ ಸುಂದರವಾಗಿ ಮೂಡಿಬಂದಿತು. ಯಕ್ಷಶಿಕ್ಷಣ ಸನಿವಾಸ ಶಿಬಿರದಲ್ಲಿ ಭಾಗವಹಿಸಿದ್ದ ಅವನಿ ಮತ್ತು ಭೈರವಿ ತಮ್ಮ ಸವಿನೆನಪುಗಳನ್ನು ಹಂಚಿಕೊಂಡರು. ಶಾಲಾ ಮುಖ್ಯೋಪಾಧ್ಯಾಯಿನಿ ಇಂದಿರಾ ಸ್ವಾಗತಿಸಿ, ಶಿಕ್ಷಕರಾದ ರಾಘವೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಮೋಹಿನಿ ಎಂ. ವಂದಿಸಿದರು. ಈ ಶಾಲೆಯಲ್ಲಿ ಒಟ್ಟು 60 ವಿದ್ಯಾರ್ಥಿನಿಯರು ಯಕ್ಷಶಿಕ್ಷಣದಲ್ಲಿ ಭಾಗವಹಿಸುತ್ತಿದ್ದಾರೆ.