ಮಂಗಳೂರು : ಭಗವದ್ಗೀತೆ, ಸಂಗೀತ, ನೃತ್ಯ, ಸಂಸ್ಕೃತಿ, ನಾಟಕ ಮತ್ತು ಶಿಕ್ಷಣಗಳ ವಿಶಿಷ್ಟ ಸಮ್ಮಿಲನವಾಗಿರುವ ನಾಟ್ಯಾಯನ ಯುಗಳ ನೃತ್ಯ ಕಾರ್ಯಕ್ರಮ ಏಪ್ರಿಲ್ 17ರಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ ನಡೆಯಿತು.
ಶ್ರೀ ದುರ್ಗಾಪರಮೇಶ್ವರಿ ದೇವಿಯ ಜಾತ್ರೋತ್ಸವದ ಹಿನ್ನಲೆಯಲ್ಲಿ ಕಟೀಲಿನ ಸರಸ್ವತಿ ಸದನದಲ್ಲಿ ನಡೆದ ಕಾರ್ಯಕ್ರಮವನ್ನು ಬ್ರಹ್ಮಶ್ರೀ ವೇದಮೂರ್ತಿ ವಿದ್ವಾನ್ ವೆಂಕಟರಮಣ ಅಸ್ರಣ್ಣರ ಶುಭಾಶೀರ್ವಾದಗಳೊಂದಿಗೆ ಉದ್ಘಾಟಿಸಲಾಯಿತು. ಆಲಂಗಾರು ಶ್ರೀಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಸುಬ್ರಮಣ್ಯ ಭಟ್ , ಉದ್ಯಮಿ ಶ್ರೀಪತಿ ಭಟ್, ನಾದಸ್ವರ ವಿದ್ವಾನ್ ಶ್ರೀ ನಾಗೇಶ್ ಎ. ಬಪ್ಪನಾಡು, ಹಿರಿಯ ನೃತ್ಯಗುರು ವಿದ್ವಾನ್ ಚಂದ್ರಶೇಖರ ನಾವಡ , ನಿವೃತ್ತ ಕನ್ನಡ ಅಧ್ಯಾಪಕ ನರಸಿಂಹ ಭಟ್ ಮತ್ತಿತರರು ದೀಪ ಬೆಳಗಿದರು.
ಕೆ.ವಿ. ರಮಣ್, ಮಂಗಳೂರು ಅವರ ಪರಿಕಲ್ಪನೆ ಮತ್ತು ನಿರೂಪಣೆಯೊಂದಿಗೆ ವಿದುಷಿ ಅಯನಾ ವಿ. ರಮಣ್ ಮೂಡುಬಿದಿರೆ ಮತ್ತು ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ನಾಟ್ಯಾಯನ-ಯುಗಳ ನೃತ್ಯ ಪ್ರದರ್ಶನ ನೀಡಿದರು. ಮೈಸೂರಿನ ಶ್ರೀ ದುರ್ಗಾ ನೃತ್ಯ ಚಾರಿಟೇಬಲ್ ಟ್ರಸ್ಟಿನ ವಿದುಷಿ ಶ್ರೀಮತಿ ಶ್ರೀವಿದ್ಯಾ ಶಶಿಧರ್ ನಟುವಾಂಗದಲ್ಲಿ ಸಹಕರಿಸಿದರು. ಡಾ. ಮುಕಾಂಬಿಕಾ ಜಿ.ಎಸ್. ಧ್ವನಿ-ಬೆಳಕು ನಿರ್ವಹಿಸಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮೂಡುಬಿದಿರೆಯ ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ಗೌರವಾಧ್ಯಕ್ಷ ಪ್ರಮತ್ ಕುಮಾರ್, ಕಾರ್ಯದರ್ಶಿ ಸುದರ್ಶನ್ ಎಂ., ಅಜಾರು ರಾಜಾರಾಮ್ ರಾವ್, ನ್ಯೂ ಪಡಿವಾಳ್ಸ್ ನ ಮಿಥುನ್ ಶೆಟ್ಟಿ, ಉದ್ಯಮಿ ನಾರಾಯಣ ಪಿ.ಎಂ., ಕಲಾವಿದ-ಕಲಾಪೋಷಕ ಉಮಾನಾಥ ಕೋಟ್ಯಾನ್ ವಿಶೇಷ ಸಹಕಾರ ನೀಡಿದ್ದರು.