ನಗುವಿನ ಬೀಜಗಳ ನಾಟಿದ
ವಸಂತದ ಹೂತೋಟವೊಂದು ಬೇಕು ನನಗೆ.
ಚಿಕ್ಕ ಮಗುವಿನ ಹೆಜ್ಜೆ ಇಟ್ಟಂತೆ
ಆ ನೆಲ ಪವಿತ್ರವಾಗಬೇಕು.
ಅಮ್ಮನ ನೋಟದಂತೆ ಬೆಣ್ಣೆಯಂತಹ ಬೆಳದಿಂಗಳು
ತೋಟದಲ್ಲಿ ಅರಳಬೇಕು.
ತೀರದ ಬಾಯಾರಿಕೆಯಿಂದ ಬಿರುಕುಬಿಟ್ಟ
ಕಪ್ಪು ಎರೆಭೂಮಿಯ ಮೇಲೆ,
ಕರುಣೆಯ ಕಣ್ಣೀರ ಹನಿಗಳ ಸುರಿಸಿ,
ಅದು ಭರವಸೆಯ ಚಿಗುರು ಮೂಡಿಸಬೇಕು.
ತಾಯಿಯ ಕಣ್ಣುಗಳಲ್ಲಿ ಕಾಣುವ
ಮುನಿಸು ಇಲ್ಲದ ಅಮಾಯಕ ಬೆಳಕಿನಂತೆ,
ಹೃದಯದಲ್ಲಿ ಭದ್ರವಾಗಿರುವ
ಸ್ವಚ್ಚ ಆನಂದ ತುಂಬಿ ಹರಿಯಬೇಕು.
ನಗುವಿನ ಹೂವಾಗಿ ಅರಳುವ
ಆ ಕ್ಷಣದವರೆಗೂ ಸಹನೆಯಿಂದ ಕಾಯಬೇಕು.
ಜಗತ್ತಿನ ಗ್ರಂಥಗಳ ಸಾರವನ್ನು ಸೇರಿಸಿ
ಎಲ್ಲ ಧರ್ಮಗಳ ಏಕತೆಯನ್ನು ಸಾರಿ,
ಜಾತಿ, ಧರ್ಮಗಳ ಭೇದಗಳಿಲ್ಲದ
ಮಾನವೀಯತೆಯ ನಗುವಿನ ಹೂಗಳು
ಪರಿಮಳಿಸಬೇಕು.
ಸ್ವಚ್ಚ ನಗುವಿನ ನೀರ ಕುಡಿದು,
ಅಜ್ಞಾನದ ಕಳೆಗಿಡ ಕಿತ್ತು ಹಾಕಿ,
ಜ್ಞಾನದ ಪರಿಮಳವನ್ನು ಹರಡಬೇಕು.
ನನಗೊಂದು ನಗುವಿನ ಹೂತೋಟ ಬೇಕು.
ಅದು ಕೇವಲ ಹೂತೋಟವಲ್ಲ.
ಮಾನವತೆಯನ್ನು ಮರೆಯದ,
ಬಂಧಗಳಿಗೆ ಸಂಕೇತವಾದ ತೋಟ ಬೇಕು.
ಮಾನವ ಸಂಬಂಧಗಳ ಮೌಲ್ಯಗಳನ್ನು
ಮರೆಯದ, ಮಧುರ ಪರಿಮಳದೊಂದಿಗೆ
ನಿತ್ಯ ಪರಿಮಳಿಸುವ
ನಗುವಿನ ಹೂತೋಟವೊಂದು
ಬೇಕಾಗಿದೆ ನನಗೆ !
ತೆಲುಗು ಮೂಲ : ವಿಲ್ಸನ್ ರಾವು ಕೊಮ್ಮವರಪು
ಕನ್ನಡಕ್ಕೆ : ಕೋಡೀಹಳ್ಳಿ ಮುರಳೀ ಮೋಹನ್