ಬೆಂಗಳೂರು : ಬುಕ್ ಬ್ರಹ್ಮ ಸಂಸ್ಥೆಯ ವತಿಯಿಂದ ದಿನಾಂಕ 08 ಆಗಸ್ಟ್ 2025ರಿಂದ 10 ಆಗಸ್ಟ್ 2025ರವರೆಗೆ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ʻಬುಕ್ ಬ್ರಹ್ಮ ಸಾಹಿತ್ಯ ಉತ್ಸವ-2025ʼಕ್ಕೆ ದಿನ್ನಕ 08 ಆಗಸ್ಟ್ 2025ರಂದು ಕೋರಮಂಗಲದ ಸೇಂಟ್ ಜಾನ್ಸ್ ಆಡಿಟೋರಿಯಂನಲ್ಲಿ ಅದ್ದೂರಿಯಾಗಿ ಚಾಲನೆ ದೊರೆಯಿತು.
ಕಾರ್ಯಕ್ರಮದ ಕುರಿತು ಬುಕ್ ಬ್ರಹ್ಮ ಸಾಹಿತ್ಯ ಉತ್ಸವದ ನಿರ್ದೇಶಕ, ಬುಕ್ ಬ್ರಹ್ಮ ಸಂಸ್ಥಾಪಕ ಸತೀಶ್ ಚಪ್ಪರಿಕೆ ಅವರು ಉತ್ಸವದ ಕುರಿತು ಪರಿಚಯದ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಕರ್ನಾಟಕದ ಪ್ರಸಿದ್ದ ರಂಗಕರ್ಮಿ ಬಿ. ಜಯಶ್ರೀ ಸೇರಿದಂತೆ ಪ್ರಮುಖ ಕಾದಂಬರಿಕಾರರು, ಕವಿಗಳು, ವಿಮರ್ಶಕರು ಹಾಗೂ ಕರ್ನಾಟಕದ ಹಲವು ವಿಶ್ವವಿದ್ಯಾಲಯಗಳ ಕುಲಪತಿಗಳು ಉಪಸ್ಥಿತರಿದ್ದರು.
ಬುಕ್ ಬ್ರಹ್ಮ ಸಾಹಿತ್ಯ ಉತ್ಸವವು ದಕ್ಷಿಣ ಭಾರತದ ಹಲವು ಭಾಷೆಗಳನ್ನು, ಹಲವು ಸಾಹಿತಿಗಳನ್ನು ಮತ್ತು ಸಾಹಿತ್ಯಾಭಿಮಾನಿಗಳನ್ನು ಒಂದೇ ಸೂರಿನಡಿ ಸೇರಿಸುವ ಮಹಾಸಂಗಮವಾಗಿದೆ. ಸಾಹಿತ್ಯ, ರಂಗಭೂಮಿ ಮತ್ತು ಕಲೆಯ ಸಮ್ಮಿಲನವಾದ ಈ ಉತ್ಸವದ ಮೊದಲನೇ ದಿನವು 53 ಗೋಷ್ಠಿಗಳು, 5 ಮಕ್ಕಳ ಸಾಹಿತ್ಯಿಕ ಚಟುವಟಿಕೆಗಳು ಹಾಗೂ 12 ಜನ ಪ್ರಮುಖ ಲೇಖಕರೊಂದಿಗೆ ಮುಖಾ – ಮುಖಿ ಸಂವಾದ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದ ಆರಂಭದ ಸಂವಾದವಾಗಿ “Beyond Booker-Tales That Travel”ನಲ್ಲಿ ಭಾಗವಹಿಸಿ ಮಾತನಾಡಿದ ಬಾನು ಮುಷ್ತಾಕ್, ದೀಪಾ ಭಾಸ್ತಿ, ಕನಿಷ್ಕಾ ಗುಪ್ತಾ, ಮೌತುಷಿ ಮುಖರ್ಜಿ ಹಾಗೂ ಸ್ವೇತಾ ಯೆರ್ರಮ್ ರವರು ಭಾರತೀಯ ಕಥೆಗಳ ಜಾಗತಿಕ ಪಯಣದ ಭವಿಷ್ಯದ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದರು. ಬಳಿಕ “Beyond Borders” ಸಂವಾದದಲ್ಲಿ ಜಯಂತ ಕಾಯ್ಕಿಣಿ ಅವರು ದಕ್ಷಿಣ ಭಾರತದ ಬಹುಭಾಷಾಗಳ ಬೆಳವಣಿಗೆ ಕುರಿತು ತಮ್ಮ ಅಭಿಪ್ರಾಯವನ್ನು ಮಂಡಿಸಿದರು.
ಕಾರ್ಯಕ್ರಮದ ವಿಶೇಷತೆಗಳು:
ಚಿಣ್ಣರ ಲೋಕ; ಮೂರರಿಂದ ಹದಿಮೂರು ವರ್ಷದ ಮಕ್ಕಳಿಗಾಗಿ ಚಿಣ್ಣರ ಲೋಕ ಎನ್ನುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇಲ್ಲಿ ಮುಖ್ಯವಾಗಿ ಅತಿಥಿಗಳಿಂದ ಮಕ್ಕಳಿಗೆ ಕಥೆ ಹೇಳುವುದು ಮತ್ತು ಮಕ್ಕಳೊಂದಿಗಿನ ಸಂವಾದಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಮಕ್ಕಳಲ್ಲಿ ಹೆಚ್ಚಿನ ಸಾಹಿತ್ಯಾಭಿರುಚಿಯನ್ನು ಬೆಳೆಸುವುದಾಗಿದೆ. ಇನ್ನು ಕಾರ್ಯಕ್ರಮದ ಪ್ರಾರಂಭದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ರೂಪ ಪೈ, “ಮಕ್ಕಳ ಜೊತೆ ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯತೆ ಹಾಗೂ ರಾಜ್ಯದ ಸಾಂಸ್ಕೃತಿಕ ವಿಚಾರಗಳ ಕುರಿತು ಸಾಹಿತ್ಯಾತ್ಮಕವಾಗಿ ಚರ್ಚೆ ನಡೆಸಿದರು. ಮುಂದುವರೆದು, ಲಾವಣ್ಯ ಪ್ರಸಾದ್‌ರವರ ಕಥೆ ಕೇಳುವ ಕಂದ, ಭರತನಾಟ್ಯ ಮುದ್ರೆ, ಶೈಲಜಾ ಎಸ್.ರವರ ಚಿತ್ರಗಳಲ್ಲಿ ದಿನಚರಿ ಮತ್ತು ಕೃತಿಕಾ ಶ್ರೀನಿವಾಸ್ ರವರ ತಾಯ್ನುಡಿ ಕಾರ್ಯಕ್ರಮಗಳು ಮಕ್ಕಳಿಗೆ ಸಾಹಿತ್ಯದ ಸತ್ವವನ್ನು ಪರಿಚಯಿಸುವ ಕಾರ್ಯಕ್ರಮಗಳು ನಡೆದವು.
ಹಲವು ಕೃತಿಗಳ ಲೋಕಾರ್ಪಣೆಗೆ ಸಾಕ್ಷಿಯಾದ ಅನಾವರಣ: ಪುಸ್ತಕಗಳ ಲೋಕದ ಅನಾವರಣ ಕಾರ್ಯಕ್ರಮ ಓದುಗರಿಗೆ ಸಾಹಿತ್ಯದ ಹೊರ ಜಗತ್ತನ್ನು ಪರಿಚಯಿಸುವುದು. ಸಾಹಿತ್ಯದ ಹಿಂದೆ ಇರುವ ಭಾವನೆ, ಬವಣೆಯನ್ನು ಸಾಹಿತ್ಯಾಭಿಮಾನಿಗಳಿಗೆ ತಿಳಿಸುವುದು ಇದರ ಮೂಲ ಉದ್ದೇಶವಾಗಿದೆ. ವೇದಿಕೆಯಲ್ಲಿ ನವಕರ್ನಾಟಕ ಪ್ರಕಾಶನದ ಬುಕ್ ಬ್ರಹ್ಮ ಕಥಾ ಸ್ಪರ್ಧೆ 2024ರ 25 ಕತೆಗಾರರ ಸಂಕಲನ ʻಅಂತ್ಯವಾಗದು ಕಥೆʼ, ರೂಪ ಪಬ್ಲಿಕೇಷನ್ ವತಿಯಿಂದ ಅಪರ್ಣಾ ಸೇನ್ (ಬಯೋಗ್ರಾಫಿ), Harper collins on the banks of the pampa, aju publications – new book, ಬಂಡಾರ ಪ್ರಕಾಶನದಿಂದ ರೇಣುಕಾ ಕೋಡಗುಂಟಿ ಅವರ ʻಚಿಗುರೊಡೆದ ಬೇರುʼ, ಕವಿತಾ ಪ್ರಕಾಶನದ ʻಬಣ್ಣದ ಬದುಕಿನ ಚಿನ್ನದ ದಿನಗಳುʼ- ಗಣೇಶ ಅಮಿನಗಡ, perspectives – Rekkachaatu Akasham, ವೈಷ್ಣವಿ ಪ್ರಕಾಶನದ ʻಸಿಕ್ಕುʼ, ʻದಿಡುಗುʼ ಮುದಿರಾಜ್ ಬಾಣದ್, ಮಲ್ಲಮ್ಮ ಜೊಂಡಿ, ಛಾಯ ಪಬ್ಲಿಕೇಷನ್, ಕಲಚವಾಡು ಪಬ್ಲಿಕೇಷನ್, ಆಕೃತಿ ಆಶಯ ಪ್ರಕಾಶನದ ʻಏರು ಘಟ್ಟದ ನಡಿಗೆʼ, ವಿಕ್ರಮ ಪ್ರಕಾಶನ ಮತ್ತು ಷಡಕ್ಷರಿ ಸ್ವಾಮಿ ದಿಗ್ಗಾಂವ್ ಟ್ರಸ್ಟ್ ನಿಂದ ʻಸ್ವಚ್ಛಮೇವ ಜಯತೆ ಬನ್ನಿʼ, ʻಸವ್ಯಸಾಚಿಗಳಾಗೋಣ ಸೇರಿದಂತೆʼ ಅನೇಕ ಕೃತಿಗಳು ಲೋಕಾರ್ಪಣೆಗೊಂಡವು.
ಸಾಹಿತ್ಸ ಉತ್ಸವದ ಆಕರ್ಷಣೆ ʻಮುಖಾಮುಖಿʼ: ಸರ್ವೇಸಾಮಾನ್ಯವಾಗಿ ಒಬ್ಬ ಉತ್ತಮ ಓದುಗನಿಗೆ ಲೇಖಕರ ಕುರಿತು ಒಂದಷ್ಟು ಅಭಿಪ್ರಾಯಗಳಿರುತ್ತವೆ. ಆ ಅಭಿಪ್ರಾಯಗಳನ್ನು ಅಥವಾ ಸಾಹಿತ್ಯದ ಕುರಿತಾದ ಗೊಂದಲಗಳನ್ನು ನೇರವಾಗಿ ಸಾಹಿತಿಗಳೊಟ್ಟಿಗೆ ಚರ್ಚಿಸುವ ಒಂದು ವಿನೂತನ ವೇದಿಕೆಯಾಗಿದೆ. ಇಲ್ಲಿ ಹಲವು ಪ್ರಮುಖ ಸಾಹಿತಿಗಳು ತಮ್ಮ ಓದುಗರ ಪ್ರಶ್ನೆಗೆ ಉತ್ತರ ಒದಗಿಸಿ, ಓದುಗರಲ್ಲಿ ಇನ್ನೂ ಹೆಚ್ಚಿನ ಸಾಹಿತ್ಯ ಅಭಿರುಚಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮೊದಲ ಸಂವಾದದಲ್ಲಿ ಬಾನು ಮುಷ್ತಾಕ್ ಭಾಗವಿಹಿಸಿ ತಮ್ಮ ಅನೇಕ ಸಾಹಿತ್ಯಭಿಮಾನಿಗಳ ಪ್ರಶ್ನೆಗಳಿಗೆ ಸ್ಪಂದಿಸಿದರು. ಬಳಿಕ ವಿವೇಕ್ ಶಾನಭಾಗ, ರವಿ ಮಂತ್ರಿ, ದೀಪಾ ಭಾಸ್ತಿ, ಜಯಂತ್ ಕಾಯ್ಕಿಣಿ, ರೂಪಾ ಪೈ, ಪ್ರತಿಭಾ ನಂದಕುಮಾರ್, ವೋಲ್ಗಾ, ಎಂ.ಎಸ್. ಆಶಾದೇವಿ. ಕುಂ. ವೀರಭದ್ರಪ್ಪ, ಸುಗತ ಶ್ರೀನಿವಾಸರಾಜು, ಬಿ. ಜಯಮೋಹನ್ ಮತ್ತು ವಿಶ್ವಾಸ್ ಪಾಟೀಲ್ ಅವರು ಓದುಗರೊಂದಿಗೆ ಮುಖಾಮುಖಿಯಾದರು.
ಮೊದಲ ದಿನದ ಸಾಹಿತ್ಯ ಉತ್ಸವವು ವಿವಿಧ ಭಾಷೆಗಳ ಪ್ರಸಿದ್ಧ ಸಾಹಿತಿಗಳ, ಸಾಹಿತ್ಯಾಸಕ್ತರ ಕೂಡುವಿಕೆಯಲ್ಲಿ ಬಹಳ ವಿಜೃಂಭಣೆಯಿಂದ ಜರುಗಿತು. ಸಾಹಿತಿ, ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಿರ್ದೇಶಕ ಪಿ. ಶೇಷಾದ್ರಿ, ನಿರ್ದೇಶಕ ಹೇಮಂತ್ ಎಂ. ರಾವ್, ಸಾಹಿತಿ ಜೋಗಿ, ಸೇರಿದಂತೆ ಹಲವು ಗಣ್ಯರು ಬುಕ್ ಬ್ರಹ್ಮ ಸಾಹಿತ್ಯ ಉತ್ಸವಕ್ಕೆ ಸಾಕ್ಷಿಯಾದರು.