ಬೆಂಗಳೂರು: ಬುಕ್ ಬ್ರಹ್ಮ ಸಂಸ್ಥೆಯು ಪ್ರತೀ ವರ್ಷದಂತೆ ಈ ವರ್ಷವೂ ಕೂಡ ʻಸ್ವಾತಂತ್ರ್ಯೋತ್ಸವ ಕಾದಂಬರಿ ಪುರಸ್ಕಾರʼ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಈ ಸ್ಪರ್ಧೆಯ ಪ್ರಶಸ್ತಿಯನ್ನು ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಪ್ರಸ್ತುತಪಡಿಸಿದ ʻಬುಕ್ ಬ್ರಹ್ಮ ಸಾಹಿತ್ಯ ಉತ್ಸವ 2025ʼರ ಕಾರ್ಯಕ್ರಮದಲ್ಲಿ 8 ಆಗಸ್ಟ್ 2025ರ ಶುಕ್ರವಾರದಂದು ಪ್ರದಾನಿಸಲಾಯಿತು.
ಈ ಬಾರಿಯ ಬುಕ್ ಬ್ರಹ್ಮ ಕಾದಂಬರಿಯ ಸ್ಪರ್ಧೆ ಪ್ರಶಸ್ತಿಯು ಬೆಂಗಳೂರಿನ ಅಂಕಿತ ಪ್ರಕಾಶನದಿಂದ ಪ್ರಕಟಗೊಂಡ ಕಾದಂಬರಿಗಾರ್ತಿ ಸುಶೀಲಾ ಡೋಣೂರ ಅವರ ʻಪೀಜಿʼ ಕಾದಂಬರಿಗೆ ಲಭಿಸಿತು. ಈ ಪ್ರಶಸ್ತಿಯು ರೂಪಾಯಿ 1 ಲಕ್ಷ ನಗದು ಸಹಿತ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಈ ಒಂದು ಲಕ್ಷದಲ್ಲಿ 75 ಸಾವಿರ ರೂಪಾಯಿ ಲೇಖಕರಿಗೆ ಹಾಗೂ 25 ಸಾವಿರ ಪ್ರಕಾಶಕರಿಗೆ ನೀಡಲಾಗಿದೆ.
ಮೆಚ್ಚುಗೆ ಪಡೆದ ಕೃತಿಗಳಾಗಿ ಪುಸ್ತಕ ಮನೆ ಪ್ರಕಾಶನದಿಂದ ಪ್ರಕಟಗೊಂಡ ಕಾದಂಬರಿಕಾರ ರಾಜಶೇಖರ ಹಳೆಮನೆ ಅವರ ʻಒಡಲುಗೊಂಡವರುʼ, ಕಂಟಲಗೆರೆಯ ಆದಿಜಂಬೂ ಪ್ರಕಾಶನದ ಕಾದಂಬರಿಕಾರ ಗುರುಪ್ರಸಾದ್ ಕಂಟಲಗೆರೆಯವರ ʻಅಟ್ರಾಸಿಟಿʼ, ಅಂಕಿತ ಪುಸ್ತಕ ಪ್ರಕಟಿಸಿರುವ ಕಾದಂಬರಿಗಾರ್ತಿ ದೀಪಾ ಜೋಶಿ ಅವರ ʻತತ್ರಾಣಿʼ, ತುಮಕೂರಿನ ಬೋಧಿಶ್ರೀ ಪ್ರಕಾಶನದ ಕಾದಂಬರಿಕಾರ ತುಂಬಾಡಿ ರಾಮಯ್ಯ ರವರ ʻಜಾಲ್ಗಿರಿʼ ಕಾದಂಬರಿಯು ಪಡೆದುಕೊಂಡಿತು. ಈ ನಾಲ್ಕು ಕಾದಂಬರಿಗಳಿಗೆ ತಲಾ 5 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು. ಈ ಪೈಕಿ 3 ಸಾವಿರ ರೂಪಾಯಿ ಲೇಖಕರಿಗೆ ಹಾಗೂ 2 ಸಾವಿರ ರೂಪಾಯಿಗಳನ್ನು ಪ್ರಕಾಶಕರಿಗೂ ನೀಡಲಾಗುವುದು.
ತೀರ್ಪುಗಾರರಲ್ಲಿ ಓರ್ವರಾದ ಬಸವರಾಜ ಕಲ್ಗುಡಿ ಅವರು ಅಂತಿಮ ಕೃತಿಗಳ ಕುರಿತು ಮಾತನಾಡಿ “ಒಡಲುಗೊಂಡವರು” ತೀವ್ರ ಸಂಘರ್ಷದ ಕತೆಯಾಗಿದ್ದು, ವರ್ತಮಾನ ಕಾಲದ ಮೂಲ ಕತೆಯಾಗಿದೆ. “ಜಾಲ್ಗಿರಿ” ಕಾದಂಬರಿ ಒಟ್ಟಾರೆಯಾಗಿ ಮೂರು ಕಾಲದ ಕಥನವಾಗಿದ್ದು, ದಲಿತ ಸಮುದಾಯದ ಹಾಡು ಪಾಡು, ಅಸ್ಪ್ರಶ್ಯತೆಯನ್ನ ಕಟ್ಟಿಕೊಡುವುದರೊಂದಿಗೆ, ಹೆಣ್ಣಿನ ಕಥನವನ್ನು ಕೂಡ ಜೀವಳವಾಗಿಸಿದೆ. ಅಟ್ರಾಸಿಟಿ ಕಾದಂಬರಿಯು ಭೂ ಮಾಲಿಕರ ಬಗೆಗಿನ ಸಿಟ್ಟು, ಆಕ್ರೋಶದ ಕಥನದ ವಸ್ತುವಾಗಿದೆ. ಅಟ್ರಾಸಿಟಿಯ ಹಿಂದೆ ಗ್ರಾಮೀಣ ಲೇವಾದೇವಿಯ ವ್ಯವಸ್ಥೆ ಯಾವ ರೀತಿ ಸೂಕ್ಷ್ಮವಾಗಿ ದಲಿತರನ್ನ ಶೋಷಣೆ ಮಾಡುತ್ತಿತ್ತು ಅನ್ನುವುದರ ಚಿತ್ರಣವಿದೆ. ತಮ್ಮೊಳಗನ ತಾವು ಅರಿಯದೇ ಇದ್ದರೆ ಮನುಷ್ಯ ಬದಲಾಗಲು ಸಾಧ್ಯವಿಲ್ಲ ಅನ್ನುವುದನ್ನು ಈ ಕಾದಂಬರಿ ತಿಳಿಸುತ್ತದೆ. ತತ್ರಾಣಿ ಕಾದಂಬರಿಯ ಘನವಾದ ವಿಚಾರವನ್ನ ಪ್ರಸ್ತುಪಡಿಸುತ್ತದೆ. ಎಲ್ಲರೂ ನಾವು ಧಾರ್ಮಿಕರು ಧರ್ಮವು ನಮ್ಮನ್ನ ಹಿಡಿದಿಡುತ್ತದೆ ಅಂತ ಅಂದುಕೊಂಡಿದ್ದೇವೆ. ಆದರೆ ಧರ್ಮವೇ ನಮ್ಮನ್ನ ಮೀರುತ್ತದೆ ಎನ್ನುವುದನ್ನು ಇಲ್ಲಿ ಲೇಖಕಿ ತಿಳಿಸಿದ್ದಾರೆ. ಈ ಒಂದು ಕಾದಂಬರಿ ಲೇಖಕಿಯನ್ನೇ ಮೀರಿ ತನ್ನನ್ನ ತಾನು ಬರೆಸಿಕೊಂಡಿದೆ. ಹೊಸ ಕಾಲದ ಹೊಸ ಹೆಣ್ಣುಮಕ್ಕಳ ಬಗ್ಗೆ, ಬೆಂಗಳೂರಿನ ಮೂಲೆ ಮೂಲೆಗಳ ಬಗ್ಗೆಗಿರುವ ಚಿತ್ರಣ ಸುಶೀಲಾ ಡೋಣೂರ ಅವರ ʻಪೀಜಿʼ ಕಾದಂಬರಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಾಹಿತಿ ಕುಂ.ವೀರಭದ್ರಪ್ಪ ಅವರು ಮಾತನಾಡಿ, “ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಕಾಲದ ಬರಹಗಾರರು ಹುಟ್ಟಿಕೊಳ್ಳುತ್ತಿರುವುದು ಸಂತಸದ ವಿಚಾರ. ಕಾದಂಬರಿ ಲೋಕಕ್ಕೆ ಇದೊಂದು ಹೆಮ್ಮೆಯ ವಿಷಯ. ಕಾದಂಬರಿಕಾರನಿಗೆ ಒಂದು ಕಾದಂಬರಿ ಬರೆಯಲು ಪೂರ್ವ ಸಿದ್ಧತೆ ಅನ್ನುವಂತಹದ್ದು ತುಂಬಾ ಮುಖ್ಯ. ಇಂತಹ ಪೂರ್ವ ಸಿದ್ಧತೆಯ ಬರವಣಿಗೆಯು ಲೇಖಕನನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವಂತಹ ಶಕ್ತಿಯನ್ನು ಕೂಡ ಹೊಂದಿದೆ,” ಎಂದು ತಿಳಿಸಿದರು.
Subscribe to Updates
Get the latest creative news from FooBar about art, design and business.
Previous Articleರಾಜ್ಯ ಒಕ್ಕಲಿಗರ ಒಕ್ಕೂಟದಿಂದ ರಾಜ್ಯಮಟ್ಟದ ಜಾನಪದ ಸಂಭ್ರಮ