ಬೆಂಗಳೂರು: ಬುಕ್ ಬ್ರಹ್ಮ ಸಂಸ್ಥೆಯು ಪ್ರತೀ ವರ್ಷದಂತೆ ಈ ವರ್ಷವೂ ಕೂಡ ʻಸ್ವಾತಂತ್ರ್ಯೋತ್ಸವ ಕಥಾʼ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಈ ಸ್ಪರ್ಧೆಯ ಪ್ರಶಸ್ತಿಯನ್ನು ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಪ್ರಸ್ತುತಪಡಿಸಿದ ʻಬುಕ್ ಬ್ರಹ್ಮ ಸಾಹಿತ್ಯ ಉತ್ಸವ 2025ʼರ ಕಾರ್ಯಕ್ರಮದಲ್ಲಿ ದಿನಾಂಕ 9 ಆಗಸ್ಟ್ 2025ರ ಶನಿವಾರದಂದು ಪ್ರದಾನಿಸಲಾಯಿತು.
ಈ ಬಾರಿಯ ಬುಕ್ ಬ್ರಹ್ಮ ಕಥಾ ಸ್ಪರ್ಧೆಯ ಪ್ರಥಮ ಬಹುಮಾನವನ್ನು ಸುಲ್ತಾನ್ ಮನ್ಸೂರ್ ಅವರ ʻಪೆರೇಡ್ ಪೊಡಿಮೋನುʼ ಕತೆ ಪಡೆದುಕೊಂಡಿತು. ಈ ಪ್ರಶಸ್ತಿಯು ರೂಪಾಯಿ 50,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ದ್ವಿತೀಯ ಬಹುಮಾನವು ಸದಾಶಿವ ಸೊರಟೂರು ಅವರ ʻಬೆಳಕು ಕುಡಿದ ಸಂಜೆʼ ಕತೆಗೆ ಲಭಿಸಿದ್ದು, ಪ್ರಶಸ್ತಿಯು ರೂಪಾಯಿ 25,000 ನಗದು ಹಾಗೂ ಪ್ರಶಸ್ತಿ ಫಲಕ, ತೃತೀಯ ಬಹುಮಾನವು ದಾದಾಪೀರ್ ಜೈಮನ್ ಅವರ ʻದಿಗಿಲುʼ ಕಥೆಗೆ ಲಭಿಸಿದ್ದು, ಪ್ರಶಸ್ತಿಯು ರೂಪಾಯಿ 15,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿತ್ತು.
ಸಮಾಧಾನಕರ ಪ್ರಶಸ್ತಿಗಳನ್ನು ಅಕ್ಷತಾ ಕೃಷ್ಣಮೂರ್ತಿ ಅವರ ʻಬೆಟ್ಟದ ದಾರಿʼ, ಸಂಜೋತಾ ಪುರೋಹಿತ ಅವರ ʻಮಿಷನ್ ಪೀಕ್ʼ, ಲಿಂಗರಾಜ ಸೊಟ್ಟಪ್ಪನವರ ʻಮೈದಾನʼ, ವಿನುತಾ ಕೆ. ಆರ್. ಶ್ರೀ ಅವರ ʻದೇಸಮ್ಯಾಲ ಮಕ್ಳುʼ, ರೇಣುಕಾ ರಮಾನಂದ ಅವರ ʻಉಘಡಾ ಉಘಡೀʼ. ಪಡೆದುಕೊಂಡವು. ಈ ಎಲ್ಲಾ ಕಥೆಗಳು ರೂಪಾಯಿ 5,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿತ್ತು.
ಮೆಚ್ಚುಗೆ ಪಡೆದ ಕಥೆಗಳು: ಕೆ. ಕರಿಸ್ವಾಮಿ ಅವರ ʻಲೆವೆಲ್ ಕ್ರಾಸಿಂಗ್ʼ, ರವಿ ಶಿವರಾಯಗೋಳ ಅವರ ʻಶಬ್ದʼ, ಮೋದೂರು ತೇಜ ಅವರ ʻದವನʼ, ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ʻಅಂಗ ಅನಂಗವೆಂಬೆರಡೂ…ʼ, ಮಲ್ಲಮ್ಮ ಜೊಂಡಿ ಅವರ ʻನೆರಳುʼ, ಸುಧಾ ಆಡುಕಳ ಅವರ ʻಯೋಜನಗಂಧಿʼ, ಶ್ರೀಧರ ಪತ್ತಾರ ಅವರ ʻಬೆಲ್ಲಾರೋಜ್ʼ, ಅನುಪಮಾ ಬೆಣಚಿನಮರ್ಡಿ ಅವರ ʻಪರ್ಪಲ್ ಸಮಯʼ, ಪ್ರವೀಣ್ ಕುಮಾರ್ ಜಿ. ಅವರ ʻಲಕ್ʼ, ಪಾಪುಗುರು ಅವರ ʻಸೀತೆ ಮತ್ತೆ ಒಂಟಿಯಾದಳುʼ, ಯಶಸ್ ನಗರ ಅವರ ʻಬೆಂಕಿ ಹುಳʼ, ಅನಿಲ್ ಗುನ್ನಾಪುರ ಅವರ ʻಬಸವ ನಿಲಯʼ, ಟಿ.ಎಸ್. ಶ್ರವಣಕುಮಾರಿ ಅವರ ʻಕಸಿʼ, ಈಶ್ವರ ಎಂ. ಅವರ ʻಕತೆ ಇಲ್ಲಿಂದಾಚೆ ಶುರು…ʼ, ಡಾ. ಲಕ್ಷ್ಮಣ್ ವಿ. ಎ. ಅವರ ʻರಾಮ್ ತೇರಿ ಗಂಗಾ ಮೈಲಿʼ, ಎಸ್. ನಾಗಶ್ರೀ ಅಜಯ್ ಅವರ ʻಇತಿ ವೃತ್ತʼ, ಚಿಕ್ಕೋಬನಹಳ್ಳಿ ಚಾಂದ್ ಬಾಷ ಅವರ ʻದೇವರ ಹೂʼ. ಈ ಎಲ್ಲಾ ಕಥೆಗಳು ರೂಪಾಯಿ 2,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿತ್ತು.
ಬುಕ್ ಬ್ರಹ್ಮ ಕಥಾ ಸ್ಪರ್ಧೆ 2025ರ ತೀರ್ಪುಗಾರರಾಗಿ ಅಮರೇಶ ನುಡಗೋಣಿ, ಸುಮಲತಾ ಹಾಗೂ ಸುನಂದಾ ಪ್ರಕಾಶ್ ಕಡಮೆ ಸಹಕರಿಸಿದರು.
ನಂತರದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಲೇಖಕ ಎಸ್. ದಿವಾಕರ್, “ಈ ಕಾಲದಲ್ಲಿ ಇಷ್ಟು ದೊಡ್ಡ ಪ್ರಮಾಣದ ಬಹುಮಾನವನ್ನು ಪಡೆಯುತ್ತಿರುವುದು ಅದೃಷ್ಟವಂತರು ಎನ್ನಬಹುದು. ಕಾರಣ ಹಿಂದಿನ ದಿನಗಳಲ್ಲಿ ಕಥೆ ಪುರಸ್ಕಾರಕ್ಕೆ ಬಹುಮಾನ ನೀಡುತ್ತಿರಲಿಲ್ಲ. 1958ರಲ್ಲಿ ಮೊಟ್ಟ ಮೊದಲ ಬಾರಿಗೆ ಕಥಾ ಸ್ಪರ್ಧೆ ಏರ್ಪಡಿಸಿ 750ರೂಪಾಯಿಗಳನ್ನು ಬಹುಮಾನವಾಗಿ ನೀಡಿತ್ತು. ಈ ಕಥಾ ಸ್ಪರ್ಧೆಗಳು ಕನ್ನಡ ಕಥಾಲೋಕಕ್ಕೆ ದೊಡ್ಡ ಕೊಡುಗೆ ನೀಡುವಲ್ಲಿ ಸಹಕಾರಿಯಾಗಿದೆ. ಬಹುಶಃ ಕಥೆಗಾರರಿಗೆ ಪುರಸ್ಕಾರ ಪಡೆದಷ್ಟೂ ಅವರ ಮೇಲಿನ ಜವಾಬ್ದಾರಿ ಹೆಚ್ಚಿಸುತ್ತದೆ. ಹಾಗಾಗಿ ನಿರಂತರವಾಗಿ ಕಥೆಗಳನ್ನು ಬರೆಯುವುದರ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಕೆಲಸ ಮಾಡಬೇಕಾಗಿದೆ. ಒಬ್ಬ ಬರಹಗಾರರ ಅವನ ಅನುಭವಕ್ಕೆ ಬಂದ, ಕೇಳಿದ, ನೋಡಿದ, ಅನೇಕ ವಿಚಾರಗಳನ್ನು ಬರವಣಿಗೆ ಮೂಲಕ ಹೊರಹಾಕಲಿಕ್ಕೆ ಪ್ರಯತ್ನಿಸುತ್ತಾನೆ. ಕಥೆಗಳು ಕನ್ನಡಿಯಿದ್ದಂತೆ ಬರಹಗಾರನ ಅನುಭವಕ್ಕೆ ಮತ್ತು ಅವನ ಒಳ-ಹೊರ ವಿಚಾರಗಳನ್ನು ಬಿಂಬಿಸುತ್ತವೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಣ್ಣಕಥೆ ಸಾಮಾನ್ಯರನ್ನು ಪ್ರತಿನಿಧಿಸುವಂತಹ ಮತ್ತು ಅವರ ನಲಿವು-ಒಲವುಗಳನ್ನು ಬಿಚ್ಚಿಡುವ ಕೆಲಸವನ್ನು ಸಣ್ಣ ಕಥೆಗಳು ಮಾಡುತ್ತವೆ. ಯಾವುದೇ ರೀತಿಯಲ್ಲಿ ಕಥೆ ನಿರೂಪಣೆಗೊಂಡರೂ ಅದರ ವಸ್ತು ಒಬ್ಬ ಸಾಮನ್ಯನ ನೈಜ ಚಿತ್ರನವಾಗಿರುತ್ತದೆ. ಇವತ್ತು ಸಣ್ಣಕಥೆ ತನ್ನ ವ್ಯಾಪ್ತಿಯನ್ನು ಬಹಳವಾಗಿ ವಿಸ್ತರಿಸಿಕೊಂಡಿದೆ. ಹೀಗೆ ನವ್ಯರ ಕಾಲದಲ್ಲಿ ಆರಂಭವಾಗಿ ಬೆಳೆದ ಸಣ್ಣಕಥೆ ಸಮೃದ್ದಿಯಾಗಿ ಬೆಳೆದಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ಇನ್ನು ಹೆಚ್ಚಿನ ಕಥೆಗಳು ಕನ್ನಡ ಸಾಹಿತ್ಯದಲ್ಲಿ ಮೂಡಿ ಬರಲಿ,” ಎಂದು ಹೇಳಿದರು.