ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ವತಿಯಿಂದ ನಡೆಯುವ ‘ತಿಂಗಳ ನಾಟಕ ಸಂಭ್ರಮ’ದ ಪ್ರಯುಕ್ತ ನಾಟಕ ಪ್ರದರ್ಶನವನ್ನು ದಿನಾಂಕ 16 ಆಗಸ್ಟ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಮೈಸೂರಿನ ಪರಿವರ್ತನ ರಂಗ ಸಮಾಜದ ಕಲಾವಿದರು ಅಭಿನಯಿಸುವ ರವೀಂದ್ರ ಭಟ್ ಇವರ ಕೃತಿಯಾಧಾರಿತ ನಾಟಕ ‘ಮೂರನೇ ಕಿವಿ’ ಪ್ರದರ್ಶನಗೊಳ್ಳಲಿದೆ. ಪ್ರೊ. ಎಸ್.ಆರ್. ರಮೇಶ್ ಇವರು ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ.
ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಇವರು ತಿಂಗಳ ಅತಿಥಿಯಾಗಿ ಭಾಗವಹಿಸಲಿದ್ದು, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ನಾಟಕದ ಬಗ್ಗೆ :
ಮಾತು ಬಾರದಿರುವ ಪ್ರಪಂಚದಲ್ಲಿ ಶಬ್ದ ಮತ್ತು ಮಾತಿಗೆ ಅಗಾಧವಾದ ಪ್ರಾಮುಖ್ಯತೆ ಇದೆ. ಹುಟ್ಟಿನಿಂದಲೇ ಕಿವುಡರಾದವರಿಗೆ ಮಾತನಾಡುವುದನ್ನು ಕಲಿಸಲು ನಡೆಸುವ ದೀರ್ಘ ಪ್ರಯತ್ನವೇ ಮೂರನೇ ಕಿವಿ ಕೃತಿಯ ಪ್ರಮುಖ ಉದ್ದೇಶ. ಮಾತು ಕಲಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ವಿಜ್ಞಾನವಿದೆ. ಕಲಿಕಾ ಅಭ್ಯಾಸಗಳಿವೆ. ನಿತ್ಯ ನಡೆಸುವ ಹೋರಾಟವಿದೆ. ಉತ್ಸಾಹವಿದೆ. ನಿರಾಶೆ, ಬೇಗುದಿ, ಆಶ್ಚರ್ಯ, ಕುತೂಹಲ ಎಲ್ಲವನ್ನು ಒಳಗೊಳ್ಳುವ ಸಾಹಸ ಹೋರಾಟವಿದು. ತಾಯಿ ಮಗ ಜೊತೆಯಲ್ಲಿ ನಡೆಸುವ ಈ ಕಠಿಣ ಹೋರಾಟದಲ್ಲಿ ಬೆಂಬಲವಾಗಿ ತಂದೆ ಮತ್ತು ಇತರ ಕುಟುಂಬದ ಸದಸ್ಯರು, ಶಾಲೆಯಲ್ಲಿನ ಶಿಕ್ಷಕಿಯರು, ವೈದ್ಯರು, ಮಿತ್ರರು ಎಲ್ಲರೂ ಪಾಲ್ಗೊಳ್ಳುತ್ತಾರೆ. ಒಟ್ಟಾರೆ ಇದು ಸಮುದಾಯದ ಪ್ರಯತ್ನವಾಗಿ ತೋರುತ್ತದೆ.