ಬೆಂಗಳೂರು : ಬುಕ್ ಬ್ರಹ್ಮ ಸಂಸ್ಥೆಯು ಪ್ರತೀ ವರ್ಷದಂತೆ ಈ ವರ್ಷವೂ ಕೂಡ ‘ಬುಕ್ ಬ್ರಹ್ಮ ಸಾಹಿತ್ಯ ಪುರಸ್ಕಾರ’ವನ್ನು ಘೋಷಿಸಿತ್ತು. ಮಲಯಾಳಂ ಲೇಖಕಿ ಕೆ.ಆರ್. ಮೀರಾ ಇವರಿಗೆ ಈ ಪ್ರಶಸ್ತಿ ಲಭಿಸಿದ್ದು, ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಪ್ರಸ್ತುತಪಡಿಸಿದ ʻಬುಕ್ ಬ್ರಹ್ಮ ಸಾಹಿತ್ಯ ಉತ್ಸವ 2025ʼರ ಕಾರ್ಯಕ್ರಮದಲ್ಲಿ ದಿನಾಂಕ 10 ಆಗಸ್ಟ್ 2025 ಭಾನುವಾರದಂದು ಪ್ರಶಸ್ತಿಯನ್ನ ಪ್ರದಾನಿಸಲಾಯಿತು.
ಪುರಸ್ಕೃತರಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರು ಪ್ರಶಸ್ತಿಯನ್ನು ಪ್ರದಾನಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಾಡೋಜ ಹಂಪ ನಾಗರಾಜಯ್ಯ “ಬುಕ್ ಬ್ರಹ್ಮ ಸಾಹಿತ್ಯ ಉತ್ಸವವು ವಿವಿಧ ಭಾಷಾ ಸಾಹಿತ್ಯದ ಇತಿಹಾಸದಲ್ಲಿ ಒಂದು ಅದ್ಭುತ ಅಧ್ಯಾಯವನ್ನು ತೆರೆಯಿತು. ಮೂರು ದಿನಗಳ ಕಾಲ ನಾಲ್ಕು ಭಾಷೆಗಳ ಒಟ್ಟು 180 ಗೋಷ್ಠಿಗಳು ಸಾಹಿತಿಗಳ ಮತ್ತು ಸಾಹಿತ್ಯಾಸಕ್ತರ ಚರ್ಚೆಗೆ ಸಾಕ್ಷಿಯಾದವು. ಬಿ.ಬಿ.ಎಲ್.ಎಫ್.ನಂತಹ ಅರ್ಥಪೂರ್ಣ ಪರಿಕಲ್ಪನೆಗಿಂತ ನಮ್ಮ ಹೊಸ ಪೀಳಿಗೆಯ ಬರಹಗಾರರಿಗೆ ನಾವು ಬೇರೆ ಯಾವ ಉತ್ತಮ ಪರಂಪರೆಯನ್ನು ಬಿಟ್ಟುಕೊಡಬಹುದು? ಮೆಗಾ ಸಾಹಿತ್ಯ ಸಮ್ಮೇಳನಗಳು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿರುವಾಗ, ಬಿ.ಬಿ.ಎಲ್.ಎಫ್. ಅರ್ಥಪೂರ್ಣ ಸಾಹಿತ್ಯ ವೇದಿಕೆಗೆ ಭರವಸೆಯ ಕಿರಣವಾಗಿದೆ ಎಂದು ಹೇಳಬೇಕಾಗಿಲ್ಲ” ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಸಮಕುಲಾಧಿಪತಿ ಪ್ರೊ. ಮಧು ವೀರರಾಘವನ್, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ, ಕೊಂಕಣಿ ಸಾಹಿತಿ ದಾಮೋದರ್ ಮೌಜೋ, ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ, ಬುಕ್ ಬ್ರಹ್ಮ ಸಾಹಿತ್ಯ ಉತ್ಸವದ ನಿರ್ದೇಶಕ ಸತೀಶ್ ಚಪ್ಪರಿಕೆ ಉಪಸ್ಥಿತರಿದ್ದರು.