ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಾಹೆ ಇದರ ವತಿಯಿಂದ ದಿನಾಂಕ 12 ಆಗಸ್ಟ್ 2025ರಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ರಂಗನಾಥನ್ ಜನ್ಮ ದಿನಾಚರಣೆಯ ಪ್ರಯುಕ್ತ ‘ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಂ.ಜಿ.ಎಂ. ಕಾಲೇಜಿನ ಗ್ರಂಥಪಾಲಕರಾದ ಶ್ರೀ ಕಿಶೋರ್‌ಕುಮಾರ್ ಇವರು ಮಾತನಾಡಿ “ನವ ಭಾರತದ ಗ್ರಂಥಾಲಯದ ಪರಿಕಲ್ಪನೆಗೆ ಹೊಸ ದಿಕ್ಕನ್ನು ಕಲ್ಪಿಸಿಕೊಟ್ಟ ಕೀರ್ತಿ ಡಾ. ಎಸ್.ಆರ್. ರಂಗನಾಥನ್ ಅವರಿಗೆ ಸಲ್ಲುತ್ತದೆ. ಅವರು ಮೂಲತ: ಗಣಿತ ಶಾಸ್ತ್ರದ ಪ್ರಾಧ್ಯಾಪಕರು. ಅವರ ಅದಮ್ಯವಾದ ಪುಸ್ತಕ ಪ್ರೀತಿ ಅವರನ್ನು (ಭಾರತದ ಗ್ರಂಥಾಲಯ ವಿಜ್ಞಾನ) ಗ್ರಂಥಾಲಯ ವಿಜ್ಞಾನದ ಪಿತಾಮಹನನ್ನಾಗಿ ರೂಪಿಸಿದೆ. ಅವರು ಅಂದು ರೂಪಿಸಿದ ವ್ಯವಸ್ಥೆಯಿಂದಾಗಿ ಶಾಲಾ ಕಾಲೇಜುಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಗ್ರಂಥಾಲಯ ಆಧುನಿಕ ವ್ಯವಸ್ಥೆಯೊಂದಿಗೆ ಪರಿವರ್ತನೆಗೊಂಡಿದೆ. ಡಾ. ಎಸ್.ಆರ್. ರಂಗನಾಥನ್ ಅವರು 12 ಅಗೋಸ್ಟ್ 1892ರಲ್ಲಿ ಜನಿಸಿದರು. ಅವರ ಕೊಡುಗೆಗಳೆಂದರೆ ಗ್ರಂಥಾಲಯದ ಪಂಚಸೂತ್ರಗಳು ಮತ್ತು ಕೊಲೊನ್ ವರ್ಗೀಕರಣ. ಗ್ರಂಥಾಲಯದ ಬಗ್ಗೆ ಮಾಡಿದ ಸಾಧನೆ, ನೀಡಿದ ಕೊಡುಗೆ ಹಾಗೂ ಅವರ ಸೇವೆಗಾಗಿ ಅವರನ್ನು ಗ್ರಂಥಾಲಯದ ಪಿತಾಮಹ ಎಂದು ಕರೆಯುತ್ತಾರೆ. ಅವರ ಹುಟ್ಟುಹಬ್ಬವನ್ನು ‘ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ’ ಆಗಿ ಆಚರಿಸಲಾಗುತ್ತದೆ ” ಎಂಬುದಾಗಿ ಹೇಳಿದರು.
ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಸದಸ್ಯರೂ, ಸಾಹಿತ್ಯ ಸಂಸ್ಕೃತಿ ಪ್ರೇಮಿಯಾದ ಶ್ರೀ ಭುವನಪ್ರಸಾದ್ ಹೆಗ್ಡೆ ಮಾತನಾಡಿ “ಯಾವುದೇ ಪ್ರಗತಿಯಾದರೂ ಗ್ರಂಥಾಲಯಗಳ ಉಪಯೋಗ ಕಡಿಮೆಯಾಗಲು ಸಾಧ್ಯವಿಲ್ಲ. ಅದರಲ್ಲೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಗ್ರಂಥಾಲಯದಲ್ಲಿರುವ ಅಮೂಲ್ಯ ಪುಸ್ತಕಗಳು ನಮ್ಮ ಆಸ್ತಿ” ಎಂದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿವೃತ್ತ ಗ್ರಂಥಪಾಲಕರಾದ ಶ್ರೀ ವೆಂಕಟೇಶ್ ನಾಯ್ಕ್ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆರ್.ಆರ್.ಸಿ. ಸಹಾಯಕ ಸಂಶೋಧಕರಾದ ಡಾ. ಅರುಣ್‌ಕುಮಾರ್ ಎಸ್.ಆರ್. ಗ್ರಂಥಪಾಲಕಿ ಶ್ರೀಮತಿ ರಕ್ಷತಾ, ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.