ಉಡುಪಿ : ತುಳುನಾಡು, ತುಳುಭಾಷೆ, ಸಾಹಿತ್ಯ, ಸಂಸ್ಕೃತಿ ಇತ್ಯಾದಿಗಳ ಉನ್ನತಿಗಾಗಿ ಕಳೆದ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಉಡುಪಿಯ ‘ತುಳು ಕೂಟ (ರಿ)’. ತುಳುನಾಡಿನಲ್ಲಿ ತುಳು ಚಳುವಳಿಯನ್ನು ಪ್ರಾರಂಭಿಸಿದವರು, ತುಳು ಸಾಹಿತ್ಯವನ್ನು ಬೆಳೆಸಲು ಪ್ರೋತ್ಸಾಹ ನೀಡಿದವರು – ತುಳುನಾಡ್ ಪ್ರೆಸ್, ತುಳು ಸಾಹಿತ್ಯಮಾಲೆ, ತುಳು ಕಾದಂಬರಿ, ತುಳು ವ್ಯಾಕರಣ ರಚನೆ ಮೊದಲಾದ ಅನೇಕ ಕೆಲಸಗಳನ್ನು ಮಾಡಿದವರು, ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿ – ತುಳುನಾಡ್ ಬ್ಯಾಂಕ್ ಹಾಗೂ ತುಳು ಚಳುವಳಿ ಪ್ರಾರಂಭಿಸಿದವರು, ದಕ್ಷಿಣ ಕನ್ನಡ ಜಿಲ್ಲೆಯನ್ನು ತುಳುನಾಡು ಅಂತ ಕರೀಬೇಕು. ಅಲ್ಲಿ ತುಳು ಭಾಷೆಯನ್ನು ಕಲಿಸುವ ಶಾಲೆ ಆರಂಭ ಆಗಬೇಕು ಹಾಗೂ ತುಳು ಭಾಷೆಯಲ್ಲಿಯೇ ಪುಸ್ತಕಗಳನ್ನು ಪ್ರಕಟವಾಗಬೇಕು, ತುಳುವನ್ನು ಆಡಳಿತ ಭಾಷೆಯಾಗಿ ಪರಿಗಣಿಸಬೇಕು ಎಂದು 1923ರಲ್ಲೇ ಕನಸ ಕಟ್ಟಿದವರು – ಪಣಿಯಾಡಿ ಶ್ರೀನಿವಾಸ ಉಪಾಧ್ಯಾಯರು.
ಉಡುಪಿಯ ತುಳು ಕೂಟವು ಕಳೆದ 30 ವರ್ಷಗಳಿಂದ ತುಳು ಕಾದಂಬರಿ ಸ್ಪರ್ಧೆಗಳನ್ನು ನಡೆಸಿ, ಅದರಲ್ಲಿ ಶ್ರೇಷ್ಠ ಸ್ಥಾನ ಪಡೆದವರಿಗೆ ‘ಪಣಿಯಾಡಿ ಪ್ರಶಸ್ತಿ’ ನೀಡುವ ಮೂಲಕ ಎಸ್.ಯು. ಪಣಿಯಾಡಿಯವರ ಸ್ಮರಣೆಯನ್ನು ಶಾಶ್ವತಗೊಳಿಸಿದೆ. ಈ ಮೂಲಕ ಅವರು ಮಾಡಿದ ಕೆಲಸವನ್ನು ನೆನಪಿಸಿ ಇಂದಿನ ಹಾಗೂ ಮುಂದಿನ ಜನಾಂಗದ ಅರಿವಿಗೆ ತರುವ ಮಹತ್ವದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ಈ ಬಾರಿ ಮೂವತ್ತನೇ ವರ್ಷದ ವಿಶ್ವಪ್ರಭಾ ಪ್ರಾಯೋಜಿತ ಪಣಿಯಾಡಿ ಕಾದಂಬರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 17 ಆಗಸ್ಟ್ 2025ರ ಭಾನುವಾರ ಸಂಜೆ 4-00 ಗಂಟೆಗೆ ಉಡುಪಿ ಕಿದಿಯೂರು ಹೋಟೆಲ್‌ನ ಪವನ್ ರೂಫ್ ಟಾಪ್ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ತುಳು ಕೂಟದ ಅಧ್ಯಕ್ಷರಾದ ಶ್ರೀ ಜಯಕರ್ ಶೆಟ್ಟಿ ಇಂದ್ರಾಳಿ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತದೆ. ನಮ್ಮ ಕೊಡವೂರು ಮೂಲದ, ಪ್ರಸ್ತುತ ಮುಂಬೈನಲ್ಲಿ ವಾಸಿಸುವ ಶ್ರೀಮತಿ ಶಾರದಾ ಎ. ಅಂಚನ್ ಇವರ ‘ಅಕೇರಿದ ಎಕ್ಕ್’ ಕಾದಂಬರಿಗಾಗಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಪುಸ್ತಕ ಪರಿಚಯವನ್ನು ಶ್ರೀಮತಿ ಸುಲೋಚನಾ ಜನಾರ್ಧನ್ (ಪಚ್ಚಿನಡ್ಕ) ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ಮತ್ತು ತುಳು ಕೂಟ ಭದ್ರಾವತಿ ಗೌರವಾಧ್ಯಕ್ಷರಾದ ಶ್ರೀ ಸುಧಾಕರ್ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ಶಿವ ಸಾಗರ್ ಗ್ರೂಪ್ ಆಫ್ ಹೋಟೆಲ್ ಉದ್ಯಮಿ ಶ್ರೀ ಪ್ರಭಾಕರ್ ಪೂಜಾರಿ, ಉಡುಪಿ ವಿಶ್ವನಾಥ್ ಶೆಣೈ ಹಾಜರಿರುವರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತುಳು ಪಾಠದಲ್ಲಿ 100% ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುವುದು.