ಬೆಳಗಾವಿ : ರಂಗಸಂಪದ ಬೆಳಗಾವಿ ಪ್ರಸ್ತುತ ಪಡಿಸುವ ‘ಸ್ಮರಿಸಿ ಬದುಕಿರೋ’ ನಾಟಕ ಪ್ರದರ್ಶನವನ್ನು ದಿನಾಂಕ 17 ಆಗಸ್ಟ್ 2025ರಂದು ಸಂಜೆ 6-30 ಗಂಟೆಗೆ ಬೆಳಗಾವಿಯ ಲೋಕಮಾನ್ಯ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೇವಲ ಬದುಕುವುದು ನೀರಸ, ಅರ್ಥವಿಲ್ಲದ ಯಾತ್ರೆ. ಸ್ಮರಿಸಿ ಬದುಕುವುದು ಅರ್ಥಪೂರ್ಣ. ಹಾಗಂತ ಯಾರ್ಯಾರನ್ನೋ ಸ್ಮರಿಸಿ ಬದುಕುವುದರಲ್ಲಿ ಮತ್ತೆ ಅರ್ಥವಿಲ್ಲ. ಮಹಿಮೋಪೇತರಾದ ವಿಜಯದಾಸರಂತಹವರನ್ನ ಸ್ಮರಿಸಿ ಬದುಕಬೇಕು ಎಂದು ಕಂಡುಕೊಂಡವರು ಕಲ್ಲೂರು ಸುಬ್ಬಣ್ಣಾಚಾರ್ಯರು (ವ್ಯಾಸ ವಿಠ್ಠಲರು). ಕಲ್ಲೂರು ಸುಬ್ಬಣ್ಣಾಚಾರ್ಯರು ವ್ಯಾಸ ವಿಠ್ಠಲರಾದ ಸ್ವಾರಸ್ಯಕರ ಸನ್ನಿವೇಶವೇ ರೋಮಾಂಚನ ಮೂಡಿಸುವಂತಹದ್ದು. ಇದೇ ಸನ್ನಿವೇಶವನ್ನು ರಂಗಮಂಚದ ಮೇಲೆ ತಮ್ಮ ಸಂದರ್ಭೋಚಿತ ನಿಪುಣತೆಯೊಂದಿಗೆ ಇಳಿಸಿದ್ದಾರೆ ಶ್ರೀ ಅರವಿಂದ ಕುಲಕರ್ಣಿಯವರು. ತಮ್ಮ ಸುಂದರ ಅಭಿನಯದಿಂದ ಪಾತ್ರಗಳಿಗೆ ಜೀವ ತುಂಬಿದ್ದಾರೆ ರಂಗಸಂಪದ ಬೆಳಗಾವಿಯ ಕಲಾವಿದರು. ಭಾವಾವೇಶ, ರೋಮಾಂಚನಗಳನ್ನೊಳಗೊಂಡ ಈ ಸುಂದರವಾಗಿ ನಿರೂಪಿತವಾದ ನಾಟಕ ಪ್ರತಿಯೊಬ್ಬರೂ ನೋಡಲೇಬೇಕು. 250 ವರ್ಷಕ್ಕೂ ಮೀರಿ ಹಿಂದೆ ನಡೆದ ಕಥೆಯನ್ನು ನಮ್ಮ ಕಣ್ಣ ಮುಂದೆ ಕಟ್ಟುವಂಥ ನಾಟಕವನ್ನು ನೋಡಿ ಮನಸ್ಸು ಮಿಡಿಯದೇ ಇರದು, ಅಂತರ್ಮನ ಹೇಳದೇ ಇರದು… ಸ್ಮರಿಸಿ ಬದುಕಿರೋ…