ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತೆಂಟನೇ ಉಪನ್ಯಾಸ ಕಾರ್ಯಕ್ರಮವು ಉಡುಪಿಯ ಅಜ್ಜರಕಾಡಿನ, ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ದಿನಾಂಕ 12 ಆಗಸ್ಟ್ 2025ರಂದು ನಡೆಯಿತು.
ಕಾರ್ಯಕ್ರಮದಲ್ಲಿ “ಆತ್ಮವಿಕಾಸದಿಂದ ರಾಷ್ಟ್ರವಿಕಾಸ – ವಿವೇಕಾನಂದರ ದಾರಿದೀಪ” ಎಂಬ ವಿಷಯದ ಕುರಿತು ಮಾತನಾಡಿದ ಖ್ಯಾತ ವಾಗ್ಮಿ, ಲೇಖಕ, ಚಿಂತಕ ಮತ್ತು ಮೈಸೂರಿನ ವಿವೇಕವಂಶಿ ಫೌಂಡೇಶನ್ ಇದರ ಸ್ಥಾಪಕರಾದ ಶ್ರೀ ನಿತ್ಯಾನಂದ ಎಸ್. ಬಿ. ಮಾತನಾಡಿ “ಸ್ವಾಮಿ ವಿವೇಕಾನಂದರು ಹೇಳಿರುವುದು ಬಹಳ ಸ್ಪಷ್ಟ – “ನೀವು ನಿಮ್ಮನ್ನು ಬೆಳೆಸಿದರೆ, ದೇಶ ಸ್ವಯಂ ಬೆಳೆಯುತ್ತದೆ.” ರಾಷ್ಟ್ರವಿಕಾಸದ ಮೂಲವೇ ಆತ್ಮವಿಕಾಸ. ಆತ್ಮವಿಕಾಸ ಎಂದರೆ ಕೇವಲ ವಿದ್ಯಾಭ್ಯಾಸ ಅಥವಾ ಉದ್ಯೋಗ ಮಾತ್ರವಲ್ಲ, ಅದು ನಮ್ಮ ದೇಹ, ಮನಸ್ಸು ಮತ್ತು ಆತ್ಮದ ಸಮಗ್ರ ಬೆಳವಣಿಗೆ. ವಿವೇಕಾನಂದರ ಆದರ್ಶಗಳು ನಮ್ಮನ್ನು ಮೂರು ಮುಖ್ಯ ದಿಕ್ಕುಗಳಲ್ಲಿ ನಡೆಸುತ್ತದೆ. ಶಕ್ತಿ, ಶ್ರದ್ಧೆ ಮತ್ತು ಸೇವೆ. ಮೊದಲನೆಯದಾಗಿ, ಶಕ್ತಿ – ದೇಹಬಲ ಮತ್ತು ಮನೋಬಲ ಎರಡೂ ರಾಷ್ಟ್ರ ನಿರ್ಮಾಣಕ್ಕೆ ಅವಶ್ಯಕ. ಎರಡನೆಯದಾಗಿ, ಶ್ರದ್ಧೆ – ನಮ್ಮ ಮೇಲೆ, ನಮ್ಮ ಸಂಸ್ಕೃತಿಯ ಮೇಲೆ ಮತ್ತು ನಮ್ಮ ದೇಶದ ಮೇಲೆ ವಿಶ್ವಾಸವಿರಬೇಕು.
ಮೂರನೆಯದಾಗಿ, ಸೇವೆ – ಸ್ವಾರ್ಥವಿಲ್ಲದ ಸೇವೆ ಸಮಾಜವನ್ನು ಬದಲಾಯಿಸುವ ಶಕ್ತಿಶಾಲಿ ಸಾಧನ. ಯುವಕರೇ, ಆತ್ಮವಿಕಾಸವನ್ನು ಕೇವಲ ಪುಸ್ತಕದ ಜ್ಞಾನದಲ್ಲಿ ಸೀಮಿತಗೊಳಿಸಬೇಡಿ. ಕ್ರೀಡಾಂಗಣದಲ್ಲಿ ಬೆವರು ಸುರಿಸಿ, ಗ್ರಂಥಾಲಯದಲ್ಲಿ ಜ್ಞಾನ ಕಲೆಹಾಕಿ, ಗ್ರಾಮದಲ್ಲಿ ಸೇವೆ ಮಾಡಿ. ನಿಮ್ಮ ಕಣ್ಣುಗಳಲ್ಲಿ ಕನಸು, ಹೃದಯದಲ್ಲಿ ದೇಶಭಕ್ತಿ, ಕೈಯಲ್ಲಿ ಕಾರ್ಯ–ಇವುಗಳ ಮಿಶ್ರಣವೇ ನಿಜವಾದ ರಾಷ್ಟ್ರಶಕ್ತಿ. ನಮ್ಮ ವೈಯಕ್ತಿಕ ಗುಣಗಳು, ನೈತಿಕತೆ ಮತ್ತು ಜವಾಬ್ದಾರಿಯು ರಾಷ್ಟ್ರದ ಗುಣಮಟ್ಟವನ್ನು ನಿರ್ಧರಿಸುತ್ತವೆ. ಆದ್ದರಿಂದ ಆತ್ಮವಿಕಾಸವನ್ನು ರಾಷ್ಟ್ರಸೇವೆಯ ಮಾರ್ಗವಾಗಿ ನೋಡೋಣ” ಎಂದು ಹೇಳಿದರು.
ಈ ಸಂದರ್ಭದಲ್ಲಿ, ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಇಲ್ಲಿನ ಪ್ರಾಂಶುಪಾಲರಾದ ಶ್ರೀ. ಸೋಜನ್ ಕೆ. ಜಿ. ಹಾಗೂ ಉಪನ್ಯಾಸಕರು ಮತ್ತು ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಜೇಂದ್ರ ಕಾರ್ಯಕ್ರಮವನ್ನು ನಿರೂಪಿಸಿ, ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಇಲ್ಲಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿ ಕ್ಷೇಮಾಪಾಲನಾಧಿಕಾರಿಯಾದ ಪ್ರೊ. ನಿಕೇತನ ವಂದಿಸಿದರು.