ಕುಂದಾಪುರ: ಅರೆಹೊಳೆ ಪ್ರತಿಷ್ಠಾನ, ನಂದಗೋಕುಲ-ಅರೆಹೊಳೆ ಗಣಪಯ್ಯ ಸ್ಮಾರಕ ದ್ವಿದಿನ ರಂಗ ಹಬ್ಬ ನಡೆಸುತ್ತಿದೆ. ಇದರ ಅಂಗವಾಗಿ 2023 ಏಪ್ರಿಲ್ 30 ಮತ್ತು ಮೇ 1 ತಾರೀಖಿನಂದು ಸಂಜೆ ಗಂಟೆ 6-30ಕ್ಕೆ ಡಾ. ಹಂದಟ್ಟು ಹರೀಶ್ ಹಂದೆ ರಂಗ ಮಂದಿರ, ಅರೆಹೊಳೆಯಲ್ಲಿ ಈ ರಂಗ ಹಬ್ಬ ನಡೆಯಲಿದೆ. ಆ ಪ್ರಯುಕ್ತ ದಿನಾಂಕ 30 ಏಪ್ರಿಲ್ ಭಾನುವಾರ ಬೈಂದೂರಿನ ಸುರಭಿ (ರಿ.) ಇದರ ಬಾಲಕಲಾವಿದರು ‘ಮಕ್ಕಳ ರಾಮಾಯಣ’ವನ್ನು ವೇದಿಕೆಯಲ್ಲಿ ಪ್ರಸ್ತುತ ಪಡಿಸಲಿದ್ದಾರೆ. ‘ಮಕ್ಕಳ ರಾಮಾಯಣ’ದ ಮೂಲ ರಚನೆ ಬಿ.ಆರ್. ವೆಂಕಟರಮಣ ಐತಾಳ್, ಕುಂದಾಪ್ರ ಕನ್ನಡಕ್ಕೆ ತರ್ಜುಮೆ ಮಾಡಿದವರು, ವಸ್ತ್ರ ವಿನ್ಯಾಸ ಮತ್ತು ನಿರ್ದೇಶನ ಗಣೇಶ್ ಮಂದಾರ್ತಿಯವರದ್ದು. ದಿನಾಂಕ 1 ಮೇ 2023 ಸೋಮವಾರ ಬೈಂದೂರಿನ ಲಾವಣ್ಯ (ರಿ.) ಇವರಿಂದ ಶ್ರೀ ರಾಜೇಂದ್ರ ಕಾರಂತರ ರಚನೆ ಮತ್ತು ನಿರ್ದೇಶನದ ‘ನಾಯಿ ಕಳೆದಿದೆ’ ನಾಟಕ ಅದೇ ರಂಗ ಮಂದಿರದಲ್ಲಿ ನಡೆಯಲಿದೆ. ಈ ಎರಡೂ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಿದ್ದು, ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭವಾಗುವುದರಿಂದ 10 ನಿಮಿಷ ಮುಂಚಿತವಾಗಿ ಬರುವಂತೆ ತಿಳಿಸಿ, ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಬಯಸಿದ್ದಾರೆ. ತಮ್ಮ ಅನುಕೂಲಕ್ಕಾಗಿ ಸಂಪರ್ಕಿಸಬೇಕಾದ ಸಂಖ್ಯೆ 9632794477
ಸುರಭಿ ಬೈಂದೂರು
ಕಳೆದ 23 ವರ್ಷಗಳಿಂದ ಕಲಾಸೇವೆಗೈಯುತ್ತಿರುವ ಈ ತಂಡವು ‘ಸುರಭಿ ಕಲಾಶಾಲೆ’ ಎಂಬ ಹೆಸರಿನಲ್ಲಿ ಭಾರತನಾಟ್ಯ, ತಬಲಾ, ಸಂಗೀತ, ಚಿತ್ರಕಲೆ ಮತ್ತು ಯಕ್ಷಗಾನ ಹೀಗೆ ಹಲವಾರು ತರಗತಿಗಳನ್ನು ನಡೆಸುತ್ತಾ ಬಂದಿದೆ. ಈ ತಂಡದಲ್ಲಿ ಹಿರಿಯರ ಮತ್ತು ಕಿರಿಯರ ಎರಡು ವಿಭಾಗಗಳಿದ್ದು ಎರಡೂ ಪ್ರದರ್ಶನ ಜನಮೆಚ್ಚುಗೆ ಗಳಿಸಿದೆ. ಸುರಭಿ ತಂಡವು ಕಳೆದ ಎಂಟು ವರ್ಷಗಳಿಂದ ನಾಟಕೋತ್ಸವವನ್ನು ಆಯೋಜಿಸುತ್ತಾ ಬಂದಿದೆ.
ನಾಟಕ : ‘ಮಕ್ಕಳ ರಾಮಾಯಣ’
ರಾಮಾಯಣದ ಕತೆ ಹೇಳುತ್ತಾ ನಾಟಕ ಕಟ್ಟುವ ಒಂದು ವಿಶಿಷ್ಟ ತಂತ್ರ ಇಲ್ಲಿ ಬಳಸಲಾಗಿದೆ. ಹಾಗಾಗಿ ಆಯಾ ಸಂದರ್ಭದಲ್ಲಿ ಪಾತ್ರಗಳೇ ನಿರೂಪಕರೂ ಆಗಿ ಬಿಡುತ್ತಾರೆ. ಈ ನಿರೂಪಣೆಯನ್ನೂ, ಸಂಭಾಷಣೆಗಳನ್ನೂ ಎಲ್ಲ ಬಾಲ ಕಲಾವಿದರೂ ಅತ್ಯಂತ ಸ್ಪಷ್ಟವಾಗಿ, ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿದ್ದು ನಾಟಕದ ಬಹಳ ದೊಡ್ಡ ಶಕ್ತಿಯಾಗಿ ಪರಿಣಮಿಸಿದೆ.
ಲಾವಣ್ಯ ಬೈಂದೂರು
4 ದಶಕಗಳಿಗಿಂತಲೂ ಮಿಗಿಲಾಗಿ ಕಲಾ ಸೇವೇಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಲಾವಣ್ಯ (ರಿ.) ಬೈಂದೂರು ಊರಿನ ಪ್ರಾತಿನಿಧಿಕ ಕಲಾ ಸಂಸ್ಥೆಯಾಗಿ ರೂಪುಗೊಂಡಿದೆ. ಸದಾ ಲವಲವಿಕೆಯಿಂದಲೇ ತನ್ನನ್ನು ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆ ಪ್ರತೀ ವರ್ಷ ಯಕ್ಷಗಾನ ಹಾಗೂ ನಾಟಕೋತ್ಸವವನ್ನು ಆಯೋಜಿಸುತ್ತಾ ಬಂದಿದೆ.
ನಾಟಕ : ನಾಯಿ ಕಳೆದಿದೆ
ಬೆಂಗಳೂರಿನಲ್ಲಿದ್ದುಕೊಂಡೇ ಕಾರ್ಯದೊತ್ತಡದ ನೆಪ ನೀಡಿ ಪ್ರತ್ಯೇಕವಾಗಿ ವಾಸಿಸುವ, ತಂದೆ-ತಾಯಿಯರ ಭಾವನೆಗಳನ್ನು ಅರ್ಥಮಾಡಿಕೊಳ್ಳಲಾಗದ, ವಾರಕ್ಕೊಮ್ಮೆ ಮನೆಗೆ ಬಂದಾಗಲೂ ಲ್ಯಾಪ್‌ಟಾಪ್, ಮೊಬೈಲ್‌ನಲ್ಲಿ ಮುಳುಗುವ ಮಕ್ಕಳು, ಬಾಳಿನ ಇಳಿ ಹೊತ್ತಿನಲ್ಲಿರುವ ವೃದ್ಧ ತಂದೆ-ತಾಯಿಯರಲ್ಲಿ ಉಂಟು ಮಾಡುವ ತಲ್ಲಣಗಳು ವೀಕ್ಷಕರ ಮನ ಕರಗುವಂತೆ ಮಾಡುತ್ತವೆ. ಅಮೇರಿಕಾದ ಭವ್ಯ ಬದುಕಿನ ಆಸೆ ಹೊತ್ತು ಅಲ್ಲಿಗೆ ತೆರಳಿದ ಮಗ ಸೊಸೆ ವೃದ್ಯಾಪ್ಯದಲ್ಲಿ ಆಸರೆಯಾಗಲಿಲ್ಲವಲ್ಲ ಎಂಬ ವೇದನೆ ಒಂದೆಡೆಯಾದರೆ, ಇನ್ನೊಂದೆಡೆ ಅವರು ಬಿಟ್ಟು ಹೋದ ನೆಮ್ಮದಿಯ ಬದುಕಿಗೆ ಮುಳ್ಳಾಗಿ ಕಾಡುವ ನಾಯಿ, ನಾಯಿಯ ಬೊಗಳುವಿಕೆ ವೃದ್ಧರ ಬದುಕನ್ನು ನರಕ ಸದೃಶವಾಗಿಸುತ್ತದೆ. ಫೋನಿನಲ್ಲೂ ತಮಗಿಂತ ನಾಯಿ ಕುರಿತಾಗಿ ತೋರುವ ಕಾಳಜಿ, ಕೇಳುವ ಪ್ರಶ್ನೆಗಳು ಅವರ ಕನಸುಗಳನ್ನು ನುಚ್ಚುನೂರಾಗಿಸುತ್ತವೆ.