ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಭಾಷೆಗೆ ಸಾಂವಿಧಾನಿಕವಾಗಿ ಮಾನ್ಯತೆ ದೊರೆತ ನೆನಪಿಗಾಗಿ ಪ್ರತಿ ವರ್ಷವೂ ಆಗಸ್ಟ್ 20ರಂದು ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಆಚರಿಸುತ್ತಾ ಬಂದಿದೆ. ಅದೇ ರೀತಿ ಈ ವರ್ಷ ದಿನಾಂಕ 20 ಆಗಸ್ಟ್ 2025ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಮಾಂಡ್ ಸೊಭಾಣ್ (ರಿ.) ಸಹಯೋಗದಲ್ಲಿ ಮಂಗಳೂರಿನ ಶಕ್ತಿನಗರದ ಕಲಾಂಗಣ್ ನಲ್ಲಿ ಶಾಲಾ ಕಾಲೇಜುಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸುವ ಮೂಲಕ ವೈಭವಯುತವಾಗಿ ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಆಚರಿಸುತ್ತಿದೆ.
ಬೆಳಿಗ್ಗೆ 9-00 ಗಂಟೆಗೆ ಧ್ವಜಾರೋಹಣದ ಮೂಲಕ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ನೆರವೇರುತ್ತದೆ. ಮಾಜಿ ಕಾರ್ಪೋರೇಟರ್ ಹಾಗೂ ಕೊಂಕಣಿ ಕಾರ್ಯಕರ್ತರಾದ ಶ್ರೀ ರಂಗನಾಥ ಸಿ. ಕಿಣಿಯವರು ಮುಖ್ಯ ಅತಿಥಿಗಳಾಗಿ, ಮಾಂಡ್ ಸೊಭಾಣ್ (ರಿ.) ಸಂಸ್ಥೆಯ ಅಧ್ಯಕ್ಷರಾದ ಶ್ರೀ ಲುವಿಸ್ ಜೆ. ಪಿಂಟೊ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 4.00 ಗಂಟೆ ತನಕ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ವಿನೋದಾವಳಿ ಸ್ಪರ್ಧೆಗಳು ನಡೆಯಲಿವೆ.
ಸಂಜೆ 4-00 ಗಂಟೆಗೆ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭವು ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಮ್. ವ್ಯವಹಾರ ನಿರ್ವಹಣಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅರುಣಾ ಪಿ. ಕಾಮತ್ರವರು ಮತ್ತು ಗೌರವ ಅತಿಥಿಗಳಾಗಿ ಮಾಂಡ್ ಸೊಭಾಣ್ (ರಿ.) ಸಂಸ್ಥೆಯ ಅಧ್ಯಕ್ಷರಾದ ಶ್ರೀ ಲುವಿಸ್ ಜೆ. ಪಿಂಟೊ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತೆಲಿನೊರವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ನೃತ್ಯ ಪ್ರದರ್ಶನ ನೀಡಿ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿದ ಮಂಗಳೂರಿನ ಕುಮಾರಿ ರೆಮೊನಾ ಇವೆಟ್ ಪಿರೇರಾ ಇವರಿಗೆ ಸನ್ಮಾನ ನಡೆಸಲಾಗುವುದು ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು.