ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇದರ ವತಿಯಿಂದ ‘ಸೇಡಿಯಾಪು ಪ್ರಶಸ್ತಿ’ ಹಾಗೂ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ದಿನಾಂಕ 16 ಆಗಸ್ಟ್ 2025 ಶನಿವಾರದಂದು ಬೆಳಿಗ್ಗೆ 10-00 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಈ ವರ್ಷದ ಸೇಡಿಯಾಪು ಪ್ರಶಸ್ತಿಯನ್ನು ಸಂಸ್ಕೃತ ವ್ಯಾಕರಣಶಾಸ್ತ್ರದ ಹಿರಿಯ ವಿದ್ವಾಂಸರಾದ ಡಾ. ಎಚ್.ವಿ. ನಾಗರಾಜ ರಾವ್ ಇವರಿಗೆ ಪ್ರದಾನ ಮಾಡಲಾಗುವುದು. 2025ರ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯನ್ನು ಖ್ಯಾತ ಲೇಖಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನಸಂಕಲನಕ್ಕೆ ನೀಡಲಾಗುತ್ತದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಜಿ.ಎಂ. ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯ್ಕ್ ಇವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟ, ಸೇಡಿಯಾಪು ಪ್ರಶಸ್ತಿ ಸಮಿತಿಯ ಪ್ರಾಯೋಜಕರಾದ ಡಾ. ಎಸ್.ಜೆ ಭಟ್ ಉಪಸ್ಥಿತರಿರುವರು. ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಆಡಳಿತಾಧಿಕಾರಿಗಳಾದ ಡಾ. ಶ್ರೀಧರ ಆರ್. ಪೈ ಪ್ರಶಸ್ತಿ ಪ್ರದಾನ ಮಾಡಲಿದ್ದು, ಉಡುಪಿಯ ಎಸ್.ಎಂ.ಎಸ್.ಪಿ. ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಎಚ್. ಮಹೇಶ್ ಭಟ್ ಇವರು ಪ್ರಶಸ್ತಿ ಪುರಸ್ಕೃತ ಡಾ. ಎಚ್.ವಿ. ನಾಗರಾಜ್ ರಾವ್ ಕುರಿತು ಅಭಿನಂದನಾ ಭಾಷಣ ಮಾಡಲಿರುವರು. ಎಂ.ಜಿ.ಎಂ. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಪುತ್ತಿ ವಸಂತ ಕುಮಾರ್ ಪುತ್ತಿ ಇವರು ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಆಯ್ಕೆಯಾದ ‘ಬೆಳದಿಂಗಳ ಸೋನೆಮಳೆ’ ಕೃತಿ ಪರಿಚಯ ಮಾಡಲಿದ್ದಾರೆ.