ಮಂಗಳೂರು : ನಾಟ್ಯಾಲಯ ಉರ್ವ (ರಿ.) ಆಯೋಜಿಸಿದ ಕೀರ್ತಿಶೇಷ ಗುರು ಶ್ರೀಮತಿ ಕಮಲಾ ಭಟ್ ಸಂಸ್ಮರಣೆ ಕಮಲಾಂಜಲಿ 2025 ಹಾಗೂ ಗುರು ಉಳ್ಳಾಲ ಮೋಹನ್ ಕುಮಾರ್ ಇವರ ಅಭಿನಂದನಾ ಕಾರ್ಯಕ್ರಮ ದಿನಾಂಕ 13 ಆಗಸ್ಟ್ 2025ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಶ್ರೀ ಕ್ಷೇತ್ರ ಕಟೀಲಿನ ಶ್ರೀಹರಿನಾರಾಯಣ ದಾಸ ಅಸ್ರಣ್ಣ ಮಾತನಾಡಿ “ಸಾಹಿತ್ಯದ ಒಳ ಮರ್ಮವನ್ನು ಅರಿತು ಸೃಜನಶೀಲತೆಯಿಂದ ನೃತ್ಯ ಪ್ರದರ್ಶನ ಮಾಡಿದಾಗ ಬ್ರಹ್ಮಾನಂದ ಅನುಭವವನ್ನು ಅನುಭವಿಸಲು ಸಾಧ್ಯ. ಭಾರತೀಯ ಲಲಿತ ಕಲೆಗಳಲ್ಲಿ ಗುರು-ಶಿಷ್ಯ ಪರಂಪರೆಯನ್ನು ಭರತನಾಟ್ಯಕಲಾ ಪ್ರಕಾರದಲ್ಲಿ ಮಾತ್ರ ಕಾಣಲು ಸಾಧ್ಯ. ಇದು ಒಂದು ಒಳ್ಳೆಯ ಸಂಪ್ರದಾಯ. ಕೀರ್ತಿ ಶೇಷ ಕಮಲ ಭಟ್ ಇವರು ಶ್ರದ್ಧೆಯಿಂದ ಗುರುಗಳಾದ ಉಳ್ಳಾಲ ಮೋಹನ್ ಕುಮಾರ್ ಇವರಲ್ಲಿ ಕಲಿತು ಅಷ್ಟೇ ಶ್ರದ್ಧೆಯಿಂದ ನಗರದಲ್ಲಿ ಪಸರಿಸಿ ಕಲೆಯ ಶ್ರೀಮಂತಿಕೆಯನ್ನು ಉತ್ತುಂಗಕ್ಕೆ ಕೊಂಡೊಯ್ದವರು ಇಂದು ಅವರಿಂದ ಕಲಿತ ಹಿರಿಯ ಶಿಷ್ಯ ವಿದುಷಿ ವಿನಯ ಅದನ್ನು ಮುಂದುವರಿಸುತ್ತಾ ಇರೋದು ಅಭಿನಂದನೀಯ” ಎಂದರು.
ಕಾರ್ಯಕ್ರಮದಲ್ಲಿ ಕಮಲ ಭಟ್ರ ಆಸೆಯಂತೆ ಅವರ ಗುರುಗಳಾದ ಉಳ್ಳಾಲ ಮೋಹನಕುಮಾರ್ ಇವರನ್ನು ಮಂಗಳವಾದ್ಯ ವೇದ ಘೋಷಗಳೊಂದಿಗೆ ಅಭಿನಂದಿಸಲಾಯಿತು.
ಸಂಸ್ಕಾರ ಭಾರತೀಯ ಮಂಗಳೂರು ನಗರದ ಅಧ್ಯಕ್ಷರಾದ ಪುರುಷೋತ್ತಮ ಭಂಡಾರಿಯವರು ಗುರುಗಳಾದ ಉಳ್ಳಾಲ ಮೋಹನ ಕುಮಾರ್ ಇವರ ಬಗ್ಗೆ ಅಭಿನಂದನೆಯ ಮಾತುಗಳನ್ನಾಡಿದರು. ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಶುಭ ಹಾರೈಸಿದರು. ಸಂಘಟಕರಾದ ಭರತಾಂಜಲಿಯ ನಿರ್ದೇಶಕ ಗುರು ಶ್ರೀಧರ ಹೊಳ್ಳ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ, ನೃತ್ಯ ಸುಧಾ ಸಂಸ್ಥೆಯ ವಿದುಷಿ ಸೌಮ್ಯ ಸುಧೀಂದ್ರ ರಾವ್ ವಂದಿಸಿದರು.
ವಿದುಷಿ ವಿನಯ ರಾವ್ ನಿರ್ದೇಶನದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ಮಾಡಿದರು. ಭರತಾಂಜಲಿ ನಿರ್ದೇಶಕಿ ವಿದುಷಿ ಪ್ರತಿಮಾ ಶ್ರೀಧರ್ ನೃತ್ಯ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣ ರಾವ್, ವಿದುಷಿ ವಾಣಿ, ಮಾಧವ ಎಸ್., ಪ್ರಸನ್ನ, ಮಾಧವ ಜೋಗಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.