ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯೋದ್ದೇಶ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮುಷ್ಟಿ ಪ್ರಜ್ಞೆಯ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಅದರಲ್ಲಿಯೂ ಕೋಟಿ ಸದಸ್ಯತ್ವದ ಅಭಿಯಾನವನ್ನು ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಹಮ್ಮಿಕೊಂಡು ಪರಿಷತ್ತಿನ ಕಾರ್ಯವ್ಯಾಪ್ತಿಯನ್ನು ಹಿಗ್ಗಿಸುವ ದೃಷ್ಟಿಯಿಂದ ಕಲಬುರಗಿ ಜಿಲ್ಲೆಯ ಕೈಲಾಸ ಪಾಟೀಲ್ ಇವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ 9 (3)ರಲ್ಲಿ ಮಾನ್ಯ ಅಧ್ಯಕ್ಷರಿಗೆ ದತ್ತವಾಗಿರುವ ಅಧಿಕಾರದನ್ವಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ನಾಮ ನಿರ್ದೇಶನ ಮಾಡಿದ್ದಾರೆ.
ಕೈಲಾಸ ಪಾಟೀಲರು ಸಂಘಟನಾ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಹತ್ವದ ಚಟುವಟಿಕೆಗಳನ್ನು ನಡೆಸಿರುತ್ತಾರೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಆಳವಾದ ಪ್ರೀತಿಯನ್ನು ಹೊಂದಿರುವ ಇವರು ಸಂಘ ಸಂಸ್ಥೆಗಳ ಜೊತೆಗೆ ಒಡನಾಟ ಹೊಂದಿದ್ದಾರೆ. ಅವರ ಕನ್ನಡ ಪ್ರೇಮ ಮತ್ತು ನಾಡಿನ ಕುರಿತ ಅಭಿಮಾನ ಕನ್ನಡ ಸಾಹಿತ್ಯ ಪರಿಷತ್ತಿಗೆ ಇನ್ನಷ್ಟು ಕ್ರಿಯಾತ್ಮಕತೆಯನ್ನು ತರಲಿದೆ ಎಂದು ನಾಡೋಜ ಡಾ. ಮಹೇಶ ಜೋಶಿಯವರು ಆಶಿಸಿದ್ದಾರೆ.