ಕಟೀಲು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕ ಇದರ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 17 ಆಗಸ್ಟ್ 2025ರಂದು ಮೂಲ್ಕಿ ತಾಲೂಕಿನ ಶಿಕ್ಷಣ ಸಂಸ್ಥೆಗಳ ಆಸಕ್ತ ವಿದ್ಯಾರ್ಥಿಗಳಿಗೆ ಮಂಗಳೂರಿನ ಜರ್ನಿ ಥೇಟರ್ ಗ್ರೂಪ್‌ನ ಕಲಾವಿದರಿಂದ ಆಯೋಜಿಸಿದ ರಂಗಗೀತೆಗಳ ಕಾರ್ಯಾಗಾರ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಾಹಿತ್ಯಾಸಕ್ತ ಪಾಂಡುರಂಗ ಭಟ್ ಕಟೀಲು “ಬಿ.ವಿ. ಕಾರಂತ, ಪು.ತಿ.ನ., ಸಿಂದೂವಳ್ಳಿ ಅನಂತಮೂರ್ತಿ, ಕೆಮ್ತೂರು ದೊಡ್ಡಣ್ಣ ಶೆಟ್ಟಿ ಮುಂತಾದವರು ರಂಗಭೂಮಿಯನ್ನು ಬೆಳೆಸಿದವರು. ರಂಗಗೀತೆಗಳ ಮೂಲಕ ಸಾಹಿತ್ಯ, ಸಾಹಿತಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯ ಅಭಿನಂದನೀಯ ಎಂದು ಹೇಳಿದರು.
ಗಜವದನ ಹೇರಂಬ, ಬಂದೇವು ನಾವು ನಿಮ್ಮ ಚರಣಕ, ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸೋ… ಹೀಗೆ ಪುರಂದರ ದಾಸರು, ಪು.ತಿ.ನ., ಬಿ.ವಿ. ಕಾರಂತ, ಎಚ್.ಎಸ್. ವೆಂಕಟೇಶ ಮೂರ್ತಿ ಮುಂತಾದ ಸಾಹಿತಿಗಳ ರಂಗ ಗೀತೆ, ವಚನಗಳ ಹಾಡಿಸಲಾಯಿತು. ಮೂಲ್ಕಿ ತಾಲೂಕಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದರು. ಶಿಬಿರದಲ್ಲಿ ಭಾಗವಹಿಸಿದ ಸಾನ್ವಿ, ಮೇಘ, ಜಗತ್, ಶ್ರೀರಕ್ಷಾ ಅನುಭವ ಹೇಳಿದರು.
ಸಮಾರೋಪದಲ್ಲಿ ಮೂಲ್ಕಿ ಕ.ಸಾ.ಪ. ಅಧ್ಯಕ್ಷ ಮಿಥುನ ಕೊಡೆತ್ತೂರು, ಕಾರ್ಯದರ್ಶಿ ಹೆರಿಕ್ ಪಾಯಸ್, ಕಟೀಲು ಪ್ರೌಢಶಾಲೆಯ ಉಪಪ್ರಾಚಾರ್ಯ ರಾಜಶೇಖರ್, ಜರ್ನಿ ಥೇಟರ್‌ನ ಶಶಾಂಕ್ ಐತಾಳ್, ಚಿನ್ಮಯಿ, ಮೇಘನಾ ಕುಂದಾಪುರ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕಿ ಶೈಲಜಾ ಕಾರ್ಯಕ್ರಮ ನಿರೂಪಿಸಿ, ತನುಜಾ ವಂದಿಸಿದರು.