ಮಂಗಳೂರು : ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಚೇಳ್ಯಾರು ಗುತ್ತು ಮನೆಯಲ್ಲಿ ದಿನಾಂಕ 16 ಆಗಸ್ಟ್ 2025ರಂದು ಆಯೋಜಿಸಿದ್ದ ಸೋಣದ ಸಂಕ್ರಾಂತಿ ಮತ್ತು ಆಗೋಳಿ ಮಂಜಣ್ಣ ನೆಂಪು ಹಾಗೂ ಚೇಳ್ಯಾರು ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್.ಆರ್. ಹೆಗ್ಡೆ ಚಾರಿಟೇಬಲ್ ಇದರ ಅಧ್ಯಕ್ಷೆ ಮತ್ತು ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಇವರು ಮಾತನಾಡಿ “ತುಳುವ ಸಂಸ್ಕೃತಿ, ಇತಿಹಾಸ ಮತ್ತು ಜನಪದ ಸಾಂಸ್ಕೃತಿಕ ನಾಯಕರ ಅಧ್ಯಯನದ ಕುರಿತು ಅಧ್ಯಯನಗಳು ಇನ್ನಷ್ಟು ನಡೆಯಬೇಕು. ಆಗೋಳಿ ಮಂಜಣ್ಣ ತುಳುನಾಡಿನ ವೀರ ನಾಯಕನಾಗಿದ್ದು, ತುಳುನಾಡ ಇತಿಹಾಸದ ಹಿನ್ನೆಲೆಯಲ್ಲಿ ಅಧ್ಯಯನಗಳು ನಡೆಯುವ ಅಗತ್ಯವಿದೆ. ಚೇಳ್ಯಾರು ಗುತ್ತು ಮಂಜನ್ನಾಯ್ಗೆರ್.. ಸಾಂಸ್ಕೃತಿಕ-ಐತಿಹಾಸಿಕ ಶೋಧ.. ಕೃತಿಯಲ್ಲಿ ಹೊಸ ವಿಚಾರಗಳು ನಿರೂಪಿತವಾಗಿದೆ. ತುಳುನಾಡ ಆಚರಣೆಯಲ್ಲಿ ಸೋಣ ಸಂಕ್ರಾಂತಿಗೆ ವಿಶೇಷ ಮಹತ್ವವಿದ್ದು, ವಾರ್ಷಿಕ ಆವರ್ತನದ ಕ್ರಮಗಳು ಕೃಷಿ ಬದುಕಿನೊಂದಿಗೆ ನಂಟನ್ನು ಹೊಂದಿದೆ” ಎಂದು ನುಡಿದರು.
ವಿಶೇಷ ಉಪನ್ಯಾಸ ನೀಡಿದ ಗೋವಿಂದದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಮಾತನಾಡಿ “ಪ್ರತಿಯೊಂದು ಗ್ರಾಮಕ್ಕೂ ತನ್ನದೇ ಆದ ಇತಿಹಾಸವಿದ್ದು ಅವೆಲ್ಲಗಳ ಸೇರಿಗೆಯೇ ರಾಷ್ಟ್ರ ಇತಿಹಾಸವಾಗಿದೆ. ಆಗೋಳಿ ಮಂಜಣ್ಣ ನಮ್ಮ ನಾಡಿನ ಆತ್ಮ ಧೈರ್ಯ, ಸಾಹಸ, ಶೌರ್ಯಗಳ ಪ್ರತೀಕವಾಗಿದ್ದು, ಮಂಜಣ್ಣ ಸಂಕಥನದ ಮರು ನಿರೂಪಣೆ ಆಗಬೇಕಾಗಿದೆ” ಎಂದರು. ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವೆಂಕಟೇಶ್ ಶೆಟ್ಟಿ ಮಾತನಾಡಿ “ಮಂಜಣ್ಣ ಕತೆ ಕಲಾ ಮಾಧ್ಯಮಗಳಲ್ಲೂ ಬಂದಿದ್ದು ಜನಪ್ರಿಯತೆ ಪಡೆದಿದೆ” ಎಂದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪುಷ್ಪರಾಜ್ ಶೆಟ್ಟಿ ಮಾತನಾಡಿ “ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಬೆಂಬಲಿಸಿ ಪ್ರೋತ್ಸಾಹ ನೀಡುವ ಕಾರ್ಯ ಶ್ಲಾಘನೀಯ” ಎಂದರು.
ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ತೆರಸಾ ವೇಗಸ್ ಶುಭ ಹಾರೈಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜ್ಯೋತಿ ಚೇಳ್ಯಾರು ಸ್ವಾಗತಿಸಿ, ಪ್ರಾಸ್ತವಿಕ ನುಡಿಗಳನ್ನಾಡಿದರು. ಚೇಳ್ಯಾರು ಗುತ್ತಿನ ಕಸ್ತೂರಿ ಶೆಟ್ಟಿ ವಂದಿಸಿದರು. ಅತ್ಯುನ್ನತ ಅಂಕ ಗಳಿಸಿದ ಪದವಿ ಪೂರ್ವ ಕಾಲೇಜಿನ ಮತ್ತು ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರದೊಂದಿಗೆ ಅಭಿನಂದಿಸಲಾಯಿತು. ವಿದ್ಯಾರ್ಥಿನಿ ಸಂಜನಾ ಇವರು ಎಸ್.ಆರ್. ಹೆಗ್ಡೆಯವರ ಬದುಕು ಸಾಧನೆಗಳ ಕುರಿತು ಮಾತನಾಡಿದರು. ಚೇಳ್ಯಾರು ಗುತ್ತಿನ ಚಂದ್ರಿಕಾ, ಉದಯ, ವತ್ಸಲಾ, ರಾಮಕೃಷ್ಣ ಪೂಂಜಾ, ಗಣೇಶ್ ಶೆಟ್ಟಿ, ದಿನೇಶ್ ಭಂಡಾರಿ, ಹಿರಿಯ ಕಲಾವಿದೆ ಗೀತಾ ಸುರತ್ಕಲ್, ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ಬೆನಟ್ ಅಮ್ಮನ್ನ, ಸುಜಾತ, ಉಪನ್ಯಾಸಕರಾದ ರವಿಚಂದ್ರ, ಜಯಶ್ರೀ ಮತ್ತು ಅಪರ್ಣ ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕಿ ತ್ರಿವೇಣಿ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿಗಳು ದೇಶ ಭಕ್ತಿಗೀತೆ ಪ್ರಸ್ತುತ ಪಡಿಸಿದರು.