ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನಕ್ಕೆ ದಿನಾಂಕ 16 ಆಗಸ್ಟ್ 2025ರ ಶನಿವಾರದಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜ್ ಉಜಿರೆ ಗ್ರೇಡ್ ಎ.+.+ ಇವರ ವಿದ್ಯಾರ್ಥಿಗಳು ಯಕ್ಷಗಾನ ಅಧ್ಯಯನಕ್ಕಾಗಿ ಭೇಟಿಯಿತ್ತರು. ಯಕ್ಷ ಗುರು ಅರುಣ್ ಕುಮಾರ್ ನೇತೃತ್ವದಲ್ಲಿ 55ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಷ್ಠಾನದ ಮ್ಯೂಸಿಯಂ ವೀಕ್ಷಿಸಿ ಸಂತೋಷಪಟ್ಟರು.
ತೆಂಕತಿಟ್ಟು ಯಕ್ಷಗಾನದ ಶಾಸ್ತ್ರೀಯ ನಾಟ್ಯ ಗುರುಗಳಾದ ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ ವಿದ್ಯಾರ್ಥಿಗಳಿಗೆ ಯಕ್ಷಗಾನ ಕುರಿತಾದ ಪ್ರಾತ್ಯಕ್ಷಿಕೆ ಮೂಲಕ ವಿವರಣೆಯನ್ನು ನೀಡಿದರು. ಹಿಂದಿನ ಕಾಲದ ಕೀರ್ತಿಶೇಷ ಪಾರ್ಥಿಸುಬ್ಬನಿಂದ ಮೊದಲ್ಗೊಂಡು ಕಾಸರಗೋಡಿನವರ ಕೊಡುಗೆಯನ್ನು ವಿವರಿಸಿದರು. ಸಿರಿಬಾಗಿಲು ಪ್ರತಿಷ್ಠಾನ ಇದೊಂದು ಅದ್ಭುತ, ಒಂದು ವೇಳೆ ಬಾರದಿದ್ದರೆ ತುಂಬಾ ನಷ್ಟವಾಗುತ್ತಿತ್ತು .ತುಂಬಾ ಸಂತೋಷವಾಗಿದೆ. ಯಕ್ಷಗಾನದ ಅಧ್ಯಯನಕ್ಕೆ ಹಲವು ಸೂಕ್ತ ವಿಚಾರಗಳು ಇವೆ ಎಂಬುದು ನಮಗೆ ಮನದಟ್ಟಾಯಿತು. ಎಂದು ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಇವರು ಸಿರಿಬಾಗಿಲು ವೆಂಕಪ್ಪಯ್ಯನವರ ಕೊಡುಗೆ ಹಾಗೂ ಪ್ರತಿಷ್ಠಾನ ಬೆಳೆದು ಬಂದ ರೀತಿಯನ್ನು ವಿದ್ಯಾರ್ಥಿಗಳಿಗೆ ಎಳೆ ಎಳೆಯಾಗಿ ವಿವರಿಸಿದರು. ಶ್ರೀ ಜಗದೀಶ್ ಕೆ. ಕೂಡ್ಲು ಸ್ವಾಗತಿಸಿ ವಂದಿಸಿದರು. ಪ್ರತಿಷ್ಠಾನಕ್ಕೆ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಬಂದಿರುವುದು ಹಾಗು ಈ ರೀತಿಯಲ್ಲಿ ಪ್ರತಿಷ್ಠಾನ , ಪ್ರತಿಷ್ಠಾನದ ಯೋಜನೆ ಸಾಫಲ್ಯ ಪಡೆಯುತ್ತಿರುವುದು ತುಂಬಾ ಸಂತಸವಾಗಿದೆ. ಮುಂದೆಯೂ ಎಲ್ಲಾ ವಿದ್ಯಾಸಂಸ್ಥೆಗಳು ಬರುವಂತಾಗಬೇಕು ಎಂದು ಸಿರಿಬಾಗಿಲು ಮಯ್ಯರು ಆಶಯ ವ್ಯಕ್ತ ಪಡಿಸಿದರು.