ಬೆಂಗಳೂರು : ರಂಗಮಂಡಲ ಅಭಿನಯಿಸುವ ಆಶಾ ರಘು ಅವರ ‘ಪೂತನಿ’ ಏಕವ್ಯಕ್ತಿ ಪ್ರದರ್ಶನ ಮೂಡಲಪಾಯ ಯಕ್ಷಗಾನ ‘ಮ್ಯಾಳ’ ಶೈಲಿಯಲ್ಲಿ ದಿನಾಂಕ 22 ಆಗಸ್ಟ್ 2025ರಂದು ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ನಾಟಕ ಪ್ರದರ್ಶನ ರಂಗರ್ಪಣೆ ನಡೆಯಲಿದೆ.
ಕರ್ಣಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಮತ್ತು ಜಾನಪದ ವಿದ್ವಾಂಸರಾದ ಡಾ. ಚಂದ್ರು ಕಾಳೇನಹಳ್ಳಿ ಇವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮಂಡ್ಯ ಕರ್ಣಾಟಕ ಸಂಘದ ಅಧ್ಯಕ್ಷರಾದ ಡಾ. ಜಯಪ್ರಕಾಶ ಗೌಡ ಮತ್ತು ಕರ್ಣಾಟಕ ಜಾನಪದ ಪರಿಷತ್ತು ಅಧ್ಯಕ್ಷರಾದ ಪ್ರೊ. ಹಿ.ಚಿ. ಬೋರಲಿಂಗಯ್ಯ ಇವರಿಗೆ ಅಭಿನಂದನೆ ಹಾಗೂ ಮೇರಿ ಪಿಂಟೋ ಇವರಿಗೆ ರಂಗ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು.
ಬಯಲಾಟ.. ದೊಡ್ಡಾಟ.. ಅಟ್ಟದಾಟ.. ಮ್ಯಾಳ ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ ‘ಮೂಡಲಪಾಯ ಯಕ್ಷಗಾನ’ ಮೂಲ ದ್ರಾವಿಡ ಜನಪದ ರಂಗದಿಂದ ಕವಲೊಡೆದ ವಿಶಿಷ್ಟ ‘ರಂಗ ವೈಭವ’ .. ಪಡವಲಪಾಯ ಯಕ್ಷಗಾನದ ಸೋದರಿಕೆ.. ವಿಭಿನ್ನವಾದ ಶೈಲಿಯನ್ನು ಮೈಗೂಡಿಸಿಕೊಂಡು ಜನಪದ ರಂಗವನ್ನು ಶ್ರೀಮಂತಗೊಳಿಸಿದೆ ‘ಮ್ಯಾಳ’.
ಖ್ಯಾತ ಕಾದಂಬರಿಗಾರ್ತಿ.. ರಂಗಶಿಕ್ಷಕಿಯೂ ಆಗಿದ್ದ ಆಶಾ ರಘು ಇವರ ಮೂಲ ರಚನೆಯನ್ನು ಖ್ಯಾತ ಬರಹಗಾರರು ..ರಂಗತಜ್ಞರೂ ಆದ ಪ್ರೊ. ತೋಂಟದಾರ್ಯ ಇವರು ‘ಮ್ಯಾಳ ಭಾಷೆ’ಗೆ ಅಳವಡಿಸಿದ್ದಾರೆ. ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಇವರ ನಿರ್ದೇಶನ ಮತ್ತು ವಸ್ತ್ರ ವಿನ್ಯಾಸದಲ್ಲಿ ಉದಯೋನ್ಮುಖ ಕಲಾವಿದೆ ..ರಂಗ ನಿರ್ದೇಶಕಿ ನಿರ್ಮಲಾ ನಾದನ್ ಅವರು ‘ಪೂತನಿ’ ಆಗಿ ರಂಗದ ಮೇಲೆ ಬರಲಿದ್ದಾರೆ. ಹೆಸರಾಂತ ಯುವ ಭಾಗವತರಾದ ಅರಳಗುಪ್ಪೆ ಪುಟ್ಟಸ್ವಾಮಿ ಅವರು ಭಾಗವಂತಿಕೆ ಮಾಡಲಿದ್ದಾರೆ.