ಮಂಗಳೂರು: ‘ಸಸಿ ಪ್ರಕಾಶನ’ದ ವತಿಯಿಂದ ಕನ್ನಡ ವಿಭಾಗ, ರಂಗ ಅಧ್ಯಯನ ಕೇಂದ್ರ ಸಂತ ಆಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮಂಗಳೂರು ಇದರ ಸಹಯೋಗದೊಂದಿಗೆ ಕಥೆಗಾರ ಮುನವ್ವರ್ ಜೋಗಿಬೆಟ್ಟು ಇವರ ಎರಡನೇ ಕಥಾ ಸಂಕಲನ ‘ಟಚ್ ಮೀ ನಾಟ್’ ಇದರ ಲೋಕಾರ್ಪಣಾ ಸಮಾರಂಭವು ದಿನಾಂಕ 17 ಆಗಸ್ಟ್ 2025ರ ಭಾನುವಾರದಂದು ಸಂತ ಆಲೋಶಿಯಸ್ ಕಾಲೇಜಿನ ರಾಬರ್ಟ್ ಸಿಕ್ವೇರ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಮಾತನಾಡಿ “ಈ ಜಗತ್ತಿನಲ್ಲಿ ಕಡ್ಡಾಯವಾಗಿ ಓದಲೇಬೇಕು ಎಂಬುದು ಏನೂ ಇಲ್ಲ. ಮನಸ್ಸಿಗೆ ತಟ್ಟುವಂತದ್ದು ಅನ್ನುವುದು ಬಿಡಿ; ಸಾಹಿತ್ಯ ಮನಸ್ಸಿಗೆ ಮುಟ್ಟಿದರೆ ಸಾಕು” ಎಂದು ಹೇಳಿದರು.
ಸಾಹಿತಿ ಸುಧಾ ಆಡುಕಳಾ ಮಾತನಾಡಿ “ಮುನವ್ವರ್ ಅವರ ಭಾಷೆ ಅದ್ಭುತವಾಗಿದ್ದು, ಅವರು ಆಯ್ದುಕೊಳ್ಳುವ ಕಥಾವಸ್ತುಗಳು ಅವರನ್ನು ಈ ಕಾಲದ ಗಟ್ಟಿ ಕಥೆಗಾರರ ಸಾಲಿನಲ್ಲಿ ನಿಲ್ಲಿಸುತ್ತವೆ” ಎಂದರು.
ಕಥೆಗಾರ ಮುನವ್ವರ್ ಜೋಗಿಬೆಟ್ಟು ಮಾತನಾಡಿ “ಜಗತ್ತಿನಲ್ಲಿರೋದು ಎರಡೇ ಜಾತಿ. ಒಂದು ಉಳ್ಳವರ ಜಾತಿ ಮತ್ತೊಂದು ಉಳ್ಳದೇ ಇರುವವರ ಜಾತಿ. ನನಗೆ ಮನುಷ್ಯನ ನೋವು ಕಾಡುತ್ತದೆ. ಹಾಗಾಗಿ ನನ್ನ ಕತೆಗಳು ನೋವಿನ ಕತೆಗಳಾಗಿವೆ” ಎನ್ನುತ್ತ ಇತ್ತೀಚೆಗೆ ಕಳೆದುಕೊಂಡ ತಮ್ಮ ತಂದೆಯನ್ನು ನೆನಪಿಸಿಕೊಂಡರು.
ಪ್ರಕಾಶಕರಾದ ಜಯರಾಮಚಾರಿ ಮಾತನಾಡಿ “ಮುನವ್ವರ್ ಕತೆಗಳು ಮನಸ್ಸನ್ನು ತಟ್ಟುತ್ತವೆ ಮತ್ತು ಮನಸ್ಸನ್ನು ಮುಟ್ಟುತ್ತವೆ” ಎಂದರು. ಸೈಫ್ ಕಾರ್ಯಕ್ರಮ ನಿರೂಪಿಸಿದರು. ಜೋಗಿಬೆಟ್ಟು ಮಸೀದಿಯ ಪದಾಧಿಕಾರಿಗಳು ಮುನವ್ವರ್ ಅವರನ್ನು ಸನ್ಮಾನಿಸಿದರು.