ಮಂಗಳೂರು : ‘ಸಂಸ್ಕಾರ ಭಾರತೀ’ ಮಂಗಳೂರು ಮಹಾನಗರ ಘಟಕದ ವತಿಯಿಂದ “ನಟರಾಜ ಪೂಜನ್” ಕಾರ್ಯಕ್ರಮವು ಮಂಗಳೂರಿನ ಸನಾತನ ನಾಟ್ಯಲಯದಲ್ಲಿ ದಿನಾಂಕ 19 ಆಗಸ್ಟ್ 2025ರ ಮಂಗಳವಾರದಂದು ಸಂಪನ್ನಗೊಂಡಿತು.
ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರೂ, ಕಲಾಚಿಂತಕರೂ, ಗಂಡು ಕಲೆ ಯಕ್ಷಗಾನವನ್ನು ಅಮೆರಿಕಾದಲ್ಲಿ ಪ್ರದರ್ಶಿಸಿದ ಹೆಗ್ಗಳಿಕೆಗೆ ಪಾತ್ರರಾದ ಪ್ರೊ. ಎಂ. ಎಲ್. ಸಾಮಗ ಇವರು ಅತಿಥಿಯ ಸ್ಥಾನದಿಂದ ಮಾತನಾಡುತ್ತಾ “ನೋಡಲಾಗದ್ದನ್ನು ನೋಡುವ ಹಾಗೆ ಮಾಡುವುದೇ ಕಲೆ. ಭಾರತೀಯವಾದ ದೇವರ ಕಲ್ಪನೆ ಮಾಡಿಕೊಳ್ಳದಿದ್ದಲ್ಲಿ ನೃತ್ಯದ ಅನುಭೂತಿಯನ್ನು ಅನುಭವಿಸಲಾಗದು. ನಮ್ಮ ನಮ್ಮ ಅನುಭವದ ಕ್ಷೇತ್ರ ವಿಸ್ತಾರವಾಗದೆ ನಾವು ವಿಕಾಸಗೊಳ್ಳಲು ಸಾಧ್ಯವಿಲ್ಲ. ನಟರಾಜನ ವಿಗ್ರಹವು ಭಾರತೀಯ ತತ್ವಶಾಸ್ತ್ರವನ್ನು ಪ್ರತಿನಿಧಿಸುವುದರೊಂದಿಗೆ ನಮ್ಮ ದೇಶದ ಕಲಾ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ನಾವು ಜ್ಞಾನಕ್ಕಾಗಿ ಈಶ್ವರನನ್ನು ಆರಾಧಿಸಬೇಕು” ಎನ್ನುತ್ತಾ ನಟರಾಜನ ವಿಗ್ರಹದ ಮಹತ್ತ್ವವನ್ನು ವಿವರಿಸಿದರು.
170 ಗಂಟೆಗಳ ಕಾಲ ನೃತ್ಯ ಪ್ರದರ್ಶಿಸಿ ದಾಖಲೆ ಮಾಡಿದ ಕುಮಾರಿ ರೆಮೊನಾ ಈವೆಟ್ ಪಿರೇರ ಇವರ ಸಾಧನೆಯನ್ನು ವಿದ್ವಾನ್ ಶ್ರೀಧರ ಹೊಳ್ಳ ವಿವರಿಸಿದ ನಂತರ ರೆಮೋನಾ ಪಿರೇರಾ ಇವರನ್ನು ಸನ್ಮಾನಿಸಲಾಯಿತು.
ಭರತನಾಟ್ಯ ಕಲಾವಿದೆಯರಾದ ಶ್ರೀಕರಿ ಮತ್ತು ವಿದುಷಿ ಪ್ರಕ್ಷಿಲಾ ಜೈನ್ ಇವರುಗಳನ್ನು ಶಾಲು ಹೊದಿಸಿ ಸ್ವಾಗತಿಸಿದ ನಂತರ ಅವರಿಂದ ಪಾಂಡಿತ್ಯಪೂರ್ಣ ಭರತನಾಟ್ಯ ಕಾರ್ಯಕ್ರಮ ನಡೆಯಿತು.
‘ಸಂಸ್ಕಾರ ಭಾರತೀ’ಯ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಭಂಡಾರಿ ಇವರ ಅಧ್ಯಕ್ಷತೆಯಲ್ಲಿ ಧ್ಯೇಯಗೀತೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ‘ಸಂಸ್ಕಾರ ಭಾರತೀ’ಯ ಅಧ್ಯಕ್ಷರು ಸ್ವಾಗತಿಸಿ, ಮಾಜಿ ಉಪಾಧ್ಯಕ್ಷರಾದ ಶ್ರೀ ಚಂದ್ರಶೇಖರ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು. ವಿದುಷಿ ಶ್ರೀಲತಾ ನಾಗರಾಜ್ ಇವರ ಸುಂದರ ನಿರೂಪಣೆಯೊಂದಿಗೆ ಮುಂದುವರೆದ ಕಾರ್ಯಕ್ರಮ ಶ್ರೀ ಮಾಧವ ಭಂಡಾರಿ ಅವರ ಧನ್ಯವಾದಗಳೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ‘ಸಂಸ್ಕಾರ ಭಾರತೀ’ಯ ಪ್ರಾಂತ್ಯ ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಪ್ರಾಂತ್ಯ ಸಹ ಕೋಶಾಧಿಕಾರಿ ರಘುವೀರ್ ಗಟ್ಟಿ, ವಿದುಷಿ ರಾಜಶ್ರೀ ಉಳ್ಳಾಲ್, ವಿದುಷಿ ಶಾರದಾಮಣಿ ಶೇಖರ್, ರತ್ನಾವತಿ ಜೆ. ಬೈಕಾಡಿ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್, ವಿದ್ವಾನ್ ಚಂದ್ರಶೇಖರ ನಾವಡ, ಹಿರಿಯ ನೃತ್ಯ ಗುರುಗಳಾದ ಪ್ರತಿಭಾ ಸಮಗ, ಚಂದ್ರಪ್ರಭಾ ಮತ್ತು ಗಣೇಶ ಮೊದಲಾದವರು ಉಪಸ್ಥಿತರಿದ್ದರು.