ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಸಂಸ್ಕೃತ ಉಪನ್ಯಾಸಕರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಪ್ರಾಂಶುಪಾಲರ ಸಂಘ ಹಾಗೂ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ರಾಜ ಸಭಾಂಗಣದಲ್ಲಿ ದಿನಾಂಕ 20 ಆಗಸ್ಟ್ 2025ರಂದು ‘ಸಂಸ್ಕೃತ ಭಾಷಾ ಪಠ್ಯ ಪ್ರಶಿಕ್ಷಣ ಕಾರ್ಯಶಾಲಾ’ ಸಂಸ್ಕೃತ ಭಾಷಾ ಉಪನ್ಯಾಸಕರ ಒಂದು ದಿನದ ಕಾರ್ಯಾಗಾರ ನಡೆಯಿತು.
ಈ ಕಾರ್ಯಾಗಾರವನ್ನು ಉದ್ಘಾಟಿಸಿದ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಯುವರಾಜ ಜೈನ್ “ನಮ್ಮ ಭಾರತೀಯ ಸಂಸ್ಕೃತಿಯ ಗಾಢವಾದ ಬೇರು ಸಂಸ್ಕೃತ ಭಾಷೆಯಲ್ಲಿ ಅಡಕವಾಗಿದೆ. ಸಂಸ್ಕೃತವು ಕೇವಲ ಒಂದು ಭಾಷೆಯಲ್ಲ, ಅದು ನಾಡಿನ ಸಂಸ್ಕೃತಿ, ತತ್ತ್ವ, ಧರ್ಮ, ಸಾಹಿತ್ಯ, ಕಲೆ ಮತ್ತು ಜ್ಞಾನದ ನಿರಂತರ ಪ್ರಕಾಶ. ಇಂದು ನಾವು ಕಾಣುತ್ತಿರುವ ಜೀವನಮೌಲ್ಯಗಳು, ಶಿಷ್ಟಾಚಾರಗಳು, ಶ್ರೀಮಂತ ಕಲೆಗಳು, ಜ್ಞಾನದ ಹರವುಗಳೆಲ್ಲ ಸಂಸ್ಕೃತ ಸಾಹಿತ್ಯದಲ್ಲಿ ನೆಲೆ ನಿಂತಿವೆ. ಸಂಸ್ಕೃತ ಅಧ್ಯಯನ ಮಾಡಿದರೆ ನಾವೇ ನಮ್ಮ ಮೂಲಗಳಿಗೆ ಹತ್ತಿರವಾಗುತ್ತೇವೆ, ಜಗತ್ತಿನೊಂದಿಗೆ ನಿಂತು ಮಾತನಾಡುವ ಶಕ್ತಿಯನ್ನು ಪಡೆಯುತ್ತೇವೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ವಿದ್ವಾಂಸರು ಮಂಗಳೂರಿನ ವಾಸುದೇವ ಕಾರಂತರು ಮಾತನಾಡುತ್ತಾ “ಗುರು ಎಂದರೆ ಕೇವಲ ಪಾಠ ಹೇಳುವವನು ಮಾತ್ರವಲ್ಲ. ಆತನು ವಿಷಯದಲ್ಲಿ ಆಳವಾದ ಜ್ಞಾನವನ್ನು ಹೊಂದಿರಬೇಕು. ಜ್ಞಾನವು ಕೇವಲ ಪುಸ್ತಕಗಳಲ್ಲಿ ಸೀಮಿತವಾಗದೆ, ಜೀವನದ ವಿವಿಧ ಕ್ಷೇತ್ರಗಳಲ್ಲಿ ಆಳವಾಗಿ ಅರ್ಥೈಸಿದಾಗ ಮಾತ್ರ ಅದು ಶಿಷ್ಯನಿಗೆ ಮಾರ್ಗದರ್ಶಕವಾಗುತ್ತದೆ. ನಿಜವಾದ ಗುರುವು ಸದಾ ಶಿಷ್ಯನ ಹಿತವನ್ನು ಮನಸ್ಸಿನಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಾನೆ. ವಿದ್ಯಾರ್ಥಿಯ ಮನಸ್ಸು ಅನೇಕ ವಿಚಾರಗಳಲ್ಲಿ ಅಲೆದಾಡುವುದು ಸಹಜ. ಇಂತಹ ಸಂದರ್ಭದಲ್ಲಿ ಶಿಷ್ಯನ ವಿಕ್ಷಿಪ್ತ ಮನಸ್ಸನ್ನು ನಿರ್ದಿಷ್ಟ ವಿಷಯದಲ್ಲಿ ನೆಲೆಗೊಳಿಸಿ, ಅಧ್ಯಯನದಲ್ಲಿ ಏಕಾಗ್ರತೆಯನ್ನು ಹುಟ್ಟಿಸುವುದು ಗುರುವಿನ ದೊಡ್ಡ ಹೊಣೆಗಾರಿಕೆ. ಇಂತಹ ಕಾರ್ಯವನ್ನು ನೆರವೇರಿಸಲು ಗುರುವು ಶಾಂತಿ, ಸಹನೆ ಮತ್ತು ತಾಳ್ಮೆಯನ್ನು ಹೊಂದಿರಬೇಕು” ಎಂದು ಹಿತವಚನ ನುಡಿದರು.
ಇದೇ ಸಂದರ್ಭದಲ್ಲಿ ಕಳೆದ ವರ್ಷ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ 100 ಅಂಕ ಗಳಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಅತ್ಯಧಿಕ ಅಂಕವನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘದ ಅಧ್ಯಕ್ಷ ರಮೇಶ ಆಚಾರ್ಯ ಸ್ವಾಗತಿಸಿ, ಉಪಾಧ್ಯಕ್ಷ ಡಾ. ಪ್ರಸನ್ನ ಕುಮಾರ್ ಐತಾಳ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮ ಸಂಯೋಜಕ ತೇಜಸ್ವೀ ಭಟ್ ನಿರೂಪಿಸಿ, ಸಂಘದ ಕಾರ್ಯದರ್ಶೀ ಡಾ. ಮಧುಕೇಶ್ವರ ಶಾಸ್ತ್ರೀ ವಂದಿಸಿದರು.