ಉಡುಪಿ : ಶ್ರೀ ಕೃಷ್ಣ ಮಠ ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಪ್ರಯುಕ್ತ ದಿನಾಂಕ 17 ಆಗಸ್ಟ್ 2025ರಂದು ಉಡುಪಿಯಲ್ಲಿ ಪುತ್ತೂರು ಶ್ರೀ ಭಗವತೀ ಯಕ್ಷಕಲಾ ಬಳಗ ಇವರ ವತಿಯಿಂದ ಯಕ್ಷಗಾನಾರ್ಪಣೆ ಕಾರ್ಯಕ್ರಮ ನಡೆಯಿತು.
ಪರ್ಯಾಯ ಪೀಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿ, “ಶ್ರೀ ಭಗವತೀ ಯಕ್ಷಕಲಾ ಬಳಗ ಸಂಸ್ಥೆಯು ಮಾಡುತ್ತಿರುವ ಯಕ್ಷಗಾನಾರ್ಪಣೆಯು ಶ್ರೀಕೃಷ್ಣನ ಜನ್ಮಾಷ್ಟಮಿಯ ಸಂಭ್ರಮ” ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಯಕ್ಷಗಾನ ಕಲೆ ಒಂದು ದೈವೀಕಲೆ, ಆಕರ್ಷಣೀಯ ಕಲೆ ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಅದು ಇಂದಿನ ಪೀಳಿಗೆಯಿಂದ ಆಗಬೇಕು. ಮಕ್ಕಳು ತಂದೆ ತಾಯಿ ಮತ್ತು ಗುರುವನ್ನು ಗೌರವಿಸಬೇಕು. ಅಂತಹ ಸಂಸ್ಕಾರ ಸಂಸ್ಕೃತಿ ಯಕ್ಷಗಾನ ಕಲೆಯಿಂದ ಸಿಗುತ್ತದೆ” ಎಂದು ಹೇಳಿದರು.
ಶ್ರೀ ಭಗವತೀ ಯಕ್ಷಕಲಾ ಬಳಗದ ಅಧ್ಯಕ್ಷ ಪ್ರಮೋದ್ ತಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಬಡಗುತಿಟ್ಟು ಗುರುಗಳಾದ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಮತ್ತು ತೆಂಕುತಿಟ್ಟು ಗುರುಗಳಾದ ರಕ್ಷಿತ್ ಶೆಟ್ಟಿ ಪಡ್ರೆ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕ ಶಂಕರ ಶೆಟ್ಟಿ ಪುತ್ತೂರು, ಕಾರ್ಯದರ್ಶಿ ರಘುನಾಥ ಮಾಬೆನ್, ಉಪಾಧ್ಯಕ್ಷ ಸುಬ್ರಹ್ಮಣ್ಯ ಜೋಷಿ, ಕೋಶಾಧಿಕಾರಿ ಚೈತನ್ಯ ಎಂ.ಜಿ., ಜೊತೆ ಕಾರ್ಯದರ್ಶಿ ಮೋಹನ್ ಉಡುಪ ಹಂದಾಡಿ, ಬಡಗುತಿಟ್ಟು ಸಂಚಾಲಕಿ ನಿರುಪಮಾ ಪ್ರಮೋದ್, ಸದಸ್ಯ ಸಂತೋಷ್ ಉಪ್ಪೂರು, ಸಂಸ್ಥೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಸ್ಥೆಯ ವಿದ್ಯಾರ್ಥಿಗಳಿಂದ ಯಕ್ಷಗಾನಾರ್ಪಣೆ, ತೆಂಕುತಿಟ್ಟು ಪೂರ್ವರಂಗ, ಬಡಗು ತಿಟ್ಟು ವಿದ್ಯಾರ್ಥಿಗಳಿಂದ ‘ಕನಕಾಂಗಿ ಕಲ್ಯಾಣ’, ತೆಂಕುತಿಟ್ಟು ವಿದ್ಯಾರ್ಥಿಗಳಿಂದ ‘ಮೋಕ್ಷತ್ರಯ’ ಎಂಬ ಯಕ್ಷಗಾನ ಕಾರ್ಯಕ್ರಮ ನಡೆಯಿತು. ಚೈತನ್ಯ ಎಂ.ಜಿ. ಕಾರ್ಯಕ್ರಮ ನಿರೂಪಿಸಿದರು.