ಉಡುಪಿ : ಉಡುಪಿಯ ಚಿತ್ರಕಲಾ ಮಂದಿರ ಕಲಾಶಾಲೆಯಲ್ಲಿ ಚಿತ್ರಕಲೆಯ ಬಗೆಗಿನ ಕಲಾ ಪದವಿಯನ್ನು 2002-2007ರ ಸಾಲಿನಲ್ಲಿ ಪೂರೈಸಿದ ಕಲಾವಿದರ ತಂಡವು 18 ವರ್ಷಗಳ ನಂತರ ಮತ್ತೊಮ್ಮೆ ಜೊತೆ ಸೇರುತ್ತ ತಾವು ಕಲಿತ ಕಲಾಶಾಲೆಯಲ್ಲಿಯೇ ‘ಸಂಗಮ’ ಸಮೂಹ ಚಿತ್ರಕಲೆ ಪ್ರದರ್ಶನ ಹಾಗೂ ಗುರುವಂದನೆ ಕಾರ್ಯಕ್ರಮ ನಡೆಸಲು ಯೋಜಿಸಿದೆ.
ಈ ಕಲಾಪ್ರದರ್ಶನವು ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿಯಿರುವ ಕಲಾಶಾಲೆಯಲ್ಲಿನ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ದಿನಾಂಕ 23 ಆಗಸ್ಟ್ 2025ರ ಶನಿವಾರದಂದು ಪೂರ್ವಾಹ್ನ 10-30ಕ್ಕೆ ಮಧುರಂ ವೈಟ್ ಲೋಟಸ್‌ನ ಆಡಳಿತ ನಿರ್ದೇಶಕರಾದ ಅಜಯ್ ಪಿ. ಶೆಟ್ಟಿಯವರಿಂದ ಉದ್ಘಾಟನೆಗೊಳ್ಳಲಿದೆ.
ಮುಖ್ಯ ಅತಿಥಿಗಳಾಗಿ ಸ್ಮರಣಿಕಾ ಸಂಸ್ಥೆಯ ಸಂಸ್ಥಾಪಕರಾದ ದಿವಾಕರ್ ಸನಿಲ್ ಹಾಗೂ ಕಲಾಶಾಲೆಯ ನಿರ್ದೇಶಕರಾದ ಡಾ. ನಿರಂಜನ್ ಯು.ಸಿ.ಯವರು ಉಪಸ್ಥಿತರಿರುತ್ತಾರೆ. ಇದೇ ಸಂದರ್ಭದಲ್ಲಿ ತಮಗೆ ಕಲಿಸಿದ ಗುರುಗಳಿಗೆ ಗುರುವಂದನೆ ಸಲ್ಲಿಸುವ ಸನ್ಮಾನ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಗುರುಗಳಾಗಿರುವ ಕಲಾಭೀಷ್ಮ ದಿ. ಕೆ.ಎಲ್. ಭಟ್‌ರವರ ಸಂಸ್ಮರಣೆ, ಕಲಾವಿದ ಗುರುಗಳಾದ ವಿಶ್ವೇಶ್ವರ ಪರ್ಕಳ, ಡಾ. ನಿರಂಜನ್‌ಯು.ಸಿ., ಡಾ. ವಿಶ್ವನಾಥ ಎ.ಎಸ್., ಬಸವರಾಜಕುತ್ನಿ, ಸುಮಂಗಲಾ ಭಟ್, ಡಾ. ಭಾರತಿ ಮರವಂತೆ, ಮಹೇಶ್ ಉಮತಾರ್, ಗಣೇಶ್ ಮಂದಾರ, ಶಂಕರ್ ಹಂದಾಡಿ ಹಾಗೂ ಮುರಳಿ ಕೃಷ್ಣ ರಾವ್‌ರವರುಗಳು ಗುರುವಂದನೆ ಸ್ವೀಕರಿಸಲಿರುವರು.
ಕಲಾವಿದರಾದ ಅನ್ನಪೂರ್ಣ ಕಾಮತ್, ಡಾ. ಜನಾರ್ದನ ರಾವ್ ಹಾವಂಜೆ, ಕಾಂತಿ ನವೀನ್ ಪ್ರಭು, ಪ್ರಶಾಂತ್ ಕೋಟ, ಪ್ರವೀಣ್ ಮಲ್ಲಾರ್, ಪುರಂದರ್ ಎಸ್. ಆಚಾರ್ಯ, ರಾಘವೇಂದ್ರ ಆಚಾರ್ಯ, ರೂಪಶ್ರೀ ರಾವ್, ಶ್ರೀನಿವಾಸ್‌ಆಚಾರ್ಯ, ಸುಜೇಂದ್ರ ಕಾರ್ಲ, ಸೂರಜ್ ಕುಮಾರ್, ವಿದ್ಯಾ ಎಲ್ಲೂರ್, ಯಶೋಧ ಎಸ್. ಸನಿಲ್‌ರವರು ರಚಿಸಿರುವ ಗಣೇಶ ಹಾಗೂ ಸಮಕಾಲೀನ ಶೈಲಿಯ ಸುಮಾರು 25ರಷ್ಟು ಕಲಾಕೃತಿಗಳು ಕಲಾ ಪ್ರದರ್ಶನದಲ್ಲಿರಲಿದೆ.ಈ ಪ್ರದರ್ಶನವು ದಿನಾಂಕ 23ರಿಂದ ಮೊದಲ್ಗೊಂಡು 31ನೇ ಆಗಸ್ಟ್ ರವಿವಾರದ ತನಕ ಅಪರಾಹ್ನ ಗಂಟೆ 2-00ರಿಂದ 6-00ರವರೆಗೆ ಕಲಾಸಕ್ತರ ವೀಕ್ಷಣೆಗೆ ತೆರೆದಿರಲಿದೆ.
ಕಲಾಶಾಲೆಯಲ್ಲಿ ಕಲಿತ ದಿನಗಳ ಮೆಲುಕು ಹಾಕುತ್ತ, ಪೂರ್ಣ ಪ್ರಮಾಣದ ಕಲಾಕಾರರಾಗಿ ವಿವಿಧ ಮಾಧ್ಯಮಗಳಲ್ಲಿ, ವಿವಿಧ ಕಲಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಈ ಕಲಾವಿದರುಗಳು ಈ ಕಲಾ ಪ್ರದರ್ಶನದ ಅವಧಿಯ ನಡುವೆ ಸಂಜೆ 4-00ಕ್ಕೆ ವಿವಿಧ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿರುವರು. 23ನೇ ಶನಿವಾರದಂದು ಕಾವಿಕಲೆಯ ಪುನರುಜ್ಜೀವನದ ಬಗೆಗಿನ ಡಾಕ್ಯುಮೆಂಟರಿ ಪ್ರದರ್ಶನ ಹಾಗೂ ಸಂವಾದವನ್ನು ಡಾ. ಜನಾರ್ದನ ರಾವ್ ಹಾವಂಜೆ, 24ನೇ ಭಾನುವಾರ ‘ಕಾಣದಕಡಲು’ ಕಿರುಚಿತ್ರ ಪ್ರದರ್ಶನ ಹಾಗೂ ಸಂವಾದವನ್ನು ಕಲಾವಿದೆ ಕಾಂತಿ ನಾಯಕ್, 28ನೇ ಶುಕ್ರವಾರ ‘ಕಲೆ ಹಾಗೂ ಪ್ರಕೃತಿ’ ನಿಸರ್ಗದ ಜೊತೆಗಿನ ಅನುಭವಗಳನ್ನು ಹವ್ಯಾಸಿ ಚಾರಣಿಗ ಸುಜೇಂದ್ರ ಕಾರ್ಲ ಹಾಗೂ 31ನೇ ಭಾನುವಾರ ಸಂಜೆ ನಾಲ್ಕಕ್ಕೆ ಮಕ್ಕಳಿಗೆ ಉಪಯುಕ್ತವೆನಿಸುವ ಕರಕುಶಲ ಕಲೆಯ ನಿರ್ಮಾಣ ಪ್ರಕ್ರಿಯೆಯ ಪ್ರದರ್ಶನವನ್ನು ಯಶೋಧಾ ಎಸ್. ಸನಿಲ್‌ರವರುಗಳು ನಡೆಸಿಕೊಡಲಿದ್ದಾರೆ.