ಉಡುಪಿ : ಬ್ರಹ್ಮಾವರ ತಾಲೂಕು ಮುಂಡ್ಕಿನಜಡ್ಡುವಿನ ವಿದುಷಿ ದೀಕ್ಷಾ ವಿ. ಇವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಮಣಿಪಾಲದ ರತ್ನ ಸಂಜೀವ ಕಲಾಮಂಡಲ ವತಿಯಿಂದ ‘ನವರಸ ದೀಕ್ಷಾ ವೈಭವಂ’ ಎಂಬ ಶಿರೋನಾಮೆಯಲ್ಲಿ ಅಜ್ಜರಕಾಡು ಡಾ. ಜಿ. ಶಂಕರ ಮಹಿಳಾ ಪದವಿ ಕಾಲೇಜಿನ ಸಭಾಂಗಣದಲ್ಲಿ ಭರತನಾಟ್ಯ ಪ್ರದರ್ಶನಕ್ಕೆ ದಿನಾಂಕ 21 ಆಗಸ್ಟ್ 2025ರ ಗುರುವಾರ ಚಾಲನೆ ನೀಡಿದರು.
ದಿನಾಂಕ 21 ಆಗಸ್ಟ್ 2025ರಿಂದ 30 ಆಗಸ್ಟ್ 2025ರವರೆಗೆ 216 ಗಂಟೆಗಳ ಒಟ್ಟು ಒಂಬತ್ತು ದಿನಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕ ಕೆ. ರಘುಪತಿ ಭಟ್, “ಯಾವುದೇ ಸಾಧನೆ ಮಾಡುವುದಕ್ಕೆ ಧೈರ್ಯ ಮತ್ತು ಸಂಕಲ್ಪ ಬೇಕು. ಉಡುಪಿಯ ಕುವರಿ ತಾನು ಕಲಿತ ಕಾಲೇಜಿನಲ್ಲಿಯೇ ಈ ವಿನೂತನ ಸಾಧನೆಯತ್ತ ಮುನ್ನುಗ್ಗಿರುವುದು ವಿಶೇಷ. ಅವರ ಸಂಕಲ್ಪಕ್ಕೆ ಯಶಸ್ಸು ಸಿಗಲಿ” ಎಂದು ಶುಭ ಹಾರೈಸಿದರು.
ಕಲಾಗುರು ಶ್ರೀಧರ ರಾವ್ ಬನ್ನಂಜೆ ಮಾತನಾಡಿ, “ದೀಕ್ಷಾ ಇವರು ಸಂಕಲ್ಪ ಸಾಧನೆಗೆ ಇಟ್ಟ ದಿಟ್ಟ ಹೆಜ್ಜೆಯ ಬಗ್ಗೆ ಗುರುವಾಗಿ ಅತ್ಯಂತ ಹೆಮ್ಮೆಯಾಗುತ್ತಿದೆ. ತನ್ಮೂಲಕ ನಾನು ಕಲಿಸಿದ ವಿದ್ಯೆ ಸಾರ್ಥಕ್ಯ ಪಡೆಯಲಿದೆ ಎನ್ನುವ ಆತ್ಮತೃಪ್ತಿಯೂ ಮೂಡಿದೆ” ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ವಿದುಷಿ ದೀಕ್ಷಾ ವಿ. “ನನ್ನ ಗುರುಗಳ, ಹೆತ್ತವರ, ಮನೆಯವರ, ಸಹಪಾಠಿಗಳ ಸಹಕಾರ ಬೆಂಬಲ ನನಗೆ ಲಭಿಸಿದ್ದು ನನ್ನ ಭಾಗ್ಯ. ಆತ್ಮಬಲ, ಛಲದಿಂದ ಮುಂದಡಿ ಇಟ್ಟಿದ್ದೇನೆ, ಯಶಸ್ವಿಯಾಗುವ ವಿಶ್ವಾಸವಿದೆ. ದಾಖಲೆಗಾಗಿ ಮಾರ್ಗ ಪದ್ಧತಿಯಲ್ಲಿ ಬರುವ ಎಲ್ಲ ನೃತ್ಯಗಳನ್ನು ಆಯ್ದುಕೊಂಡಿದ್ದು, ಜತೆಗೆ ಬೇರೆ ಹಾಡುಗಳಿಗೂ ನೃತ್ಯ ಮಾಡಲಿದ್ದೇನೆ. ಪ್ರತೀ 3 ಗಂಟೆಗೆ 15 ನಿಮಿಷ ಅಥವಾ 1 ಗಂಟೆಗೆ 5 ನಿಮಿಷ ವಿರಾಮ ಇದೆ” ಎಂದರು.
ಪ್ರಮುಖರಾದ ಬಿ.ಎನ್. ಶಂಕರ ಪೂಜಾರಿ, ಗೀತಾಂಜಲಿ ಸುವರ್ಣ, ವಿದುಷಿ ಉಷಾ ಹೆಬ್ಬಾರ್, ವಿದುಷಿ ವೀಣಾ ಸಾಮಗ, ಕಾಲೇಜಿನ ಪ್ರಾಂಶುಪಾಲ ಸೋಜನ್ ಕೆ.ಜಿ. ಮಾತನಾಡಿ ಶುಭ ಹಾರೈಸಿದರು.
ವೀಣಾ ಎಸ್. ಶೆಟ್ಟಿ ಉಪನ್ಯಾಸಕಿ ಡಾ. ನಿಕೇತನಾ, ಅಶ್ವಿನಿ ಮಹೇಶ್ ಠಾಕೂರ್, ರಾಹುಲ್, ಹೆತ್ತವರಾದ ವಿಟ್ಠಲ್ ಮತ್ತು ಶುಭಾ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ರಾಮಚಂದ್ರ ಪಾಟ್ಕರ್ ನಿರೂಪಿಸಿದರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ವಿನ್ನರ್ ಯಶವಂತ್ ಎಂ.ಜಿ. ಪ್ರಸ್ತಾವನೆಗೈದರು. ಮಹೇಶ್ ಠಾಕೂರ್ ಸ್ವಾಗತಿಸಿ, ವಂದಿಸಿದರು.