‘ಯಥಾ ಗುರು ತಥಾ ಶಿಷ್ಯ’ ಎಂಬ ನಾಣ್ಣುಡಿಗೆ ಅನ್ವಯರಾಗಿರುವ ನೃತ್ಯಗುರು ವಿದುಷಿ ಮೇದಿನಿ ಭರತ್ ಮತ್ತು ಕಲಾವಿದೆ ಕುಮಾರಿ ಶ್ರೇಯಾ ರಾಜಶೇಖರ್ ಹಿರೇಮಠ್ ಇಬ್ಬರೂ ಬಹುಮುಖ ಪ್ರತಿಭಾನ್ವಿತರು. ನೃತ್ಯಕಲಾವಿದೆ ಹಾಗೂ ಗುರುವಾಗಿ ಬದ್ಧತೆಯಿಂದ ‘ಚಿತ್ಸಭಾ ಕಲಾಶಾಲೆ’ ನೃತ್ಯಸಂಸ್ಥೆಯ ಮೂಲಕ ನೂರಾರು ಉದಯೋನ್ಮುಖ ಕಲಾವಿದರನ್ನು ರೂಪಿಸುತ್ತಿರುವ ಮೇದಿನಿಯವರ ನುರಿತ ಗರಡಿಯಲ್ಲಿ ತರಬೇತಿ ಪಡೆಯುತ್ತಿರುವ ಕಲಾಶಿಲ್ಪ ಈ ಶ್ರೇಯಾ. ಶ್ರೀ ರಾಜಶೇಖರ್ ಹಿರೇಮಠ ಮತ್ತು ಬಿ.ಹೆಚ್. ರೇಣುಕಾರ ಪುತ್ರಿ ಶ್ರೇಯಾ, ಕಳೆದ ಹಲವಾರು ವರ್ಷಗಳಿಂದ ಭರತನಾಟ್ಯಾಭ್ಯಾಸ ಮಾಡುತ್ತಿದ್ದು, ಈಗಾಗಲೇ ಇವಳು ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮಂಡಲ ನೃತ್ಯ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದು ಅನೇಕ ವೇದಿಕೆಗಳಲ್ಲಿ ತನ್ನ ಪ್ರತಿಭಾ ಪ್ರದರ್ಶನ ಮಾಡಿದ್ದಾಳೆ. ರಂಗಭೂಮಿ- ಚಲನಚಿತ್ರಗಳ ಅಭಿನಯ ತರಬೇತಿ ಹೊಂದಿರುವ ಶ್ರೇಯಾಗೆ ಬರವಣಿಗೆ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಕೂಡ ಹವ್ಯಾಸ. ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪದವಿ ತರಗತಿಯಲ್ಲಿ ಓದುತ್ತಿರುವ ಶ್ರೇಯಾ, ದಿನಾಂಕ 30 ಆಗುಸತ 2025ರ ಶನಿವಾರ ಸಂಜೆ 5-30 ಗಂಟೆಗೆ ನಗರದ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ನೆರವೇರಿಸಿಕೊಳ್ಳುತ್ತಿದ್ದಾಳೆ. ಇವಳ ನೃತ್ಯ ಕಲಾನೈಪುಣ್ಯವನ್ನು ಕಣ್ತುಂಬಿಕೊಳ್ಳಲು ಸರ್ವರಿಗೂ ಆದರದ ಸ್ವಾಗತ.
ಮೂಲತಃ ಬಿಜಾಪುರದವರಾದ ರಾಜಶೇಖರ್ ಹಿರೇಮಠ ದಂಪತಿಗಳ ಪುತ್ರಿಯಾದ ಶ್ರೇಯಾಗೆ ನೃತ್ಯ ಬಾಲ್ಯದ ಒಲವು. ಆರು ವರ್ಷದ ಬಾಲೆಯಾಗಿದ್ದಾಗಲೇ ನೃತ್ಯ ಪರಂಪರೆಯ ಕಲಾಕ್ಷೇತ್ರ ಸ್ವಾತಿಲೇಖಾ ಡೇ ಅವರಲ್ಲಿ ಭರತನಾಟ್ಯ ಕಲಿಯಲು ಸೇರ್ಪಡೆಯಾದಳು. ಹತ್ತು ವರ್ಷಗಳ ಕಲಿಕೆಯ ನಂತರ ಶ್ರೇಯಾ ಮುಂದೆ ವಿದುಷಿ, ಮೇದಿನಿ ಭರತ್ ಇವರಲ್ಲಿ ನೃತ್ಯ ಮುಂದುವರಿಸಿ ಪರಿಶ್ರಮದಿಂದ ವಿದ್ಯಾರ್ಜಿಸುತ್ತಿದ್ದಾಳೆ. ನೃತ್ಯದಲ್ಲಿ, ಅಭಿನಯ ಮತ್ತು ಭರತನಾಟ್ಯದ ಪಠ್ಯ ವಿಷಯ ಅವಳ ಮೆಚ್ಚಿನ ಭಾಗಗಳು. ರಂಗಶಂಕರ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಸ್ಕೂಲ್ ಆಫ್ ಆಕ್ಟಿಂಗ್ ಮತ್ತು ಇನ್ನಿತರ ಸಂಸ್ಥೆಗಳಲ್ಲಿ ರಂಗಭೂಮಿಯ ತರಬೇತಿ ಪಡೆದಿರುವುದು ಇವಳ ವಿಶೇಷ. ಜೊತೆಗೆ ನಾಡಿನ ಅನೇಕ ದೇವಾಲಯಗಳಲ್ಲಿ ನರ್ತಿಸಿ ತನ್ನ ನಾಟ್ಯಪ್ರತಿಭೆ ಪ್ರದರ್ಶಿಸಿದ್ದಾಳೆ. ಜೈನ್ ಪಬ್ಲಿಕ್ ಶಾಲೆ ಮತ್ತು ಸುರಾನ ಕಾಲೇಜಿನಲ್ಲಿ ಪಿ.ಯು.ಸಿ. ಓದಿರುವ ಶ್ರೇಯಾ, ಪ್ರಸಕ್ತ ಓದುತ್ತಿರುವ ಕ್ರೈಸ್ಟ್ ಯೂನಿವರ್ಸಿಟಿಯ ಕಾಲೇಜಿನ (ಪದವಿ ತರಗತಿ- ಇಂಗ್ಲೀಷ್ ಮತ್ತು ಕಲ್ಚುರಲ್ ಸ್ಟಡೀಸ್) ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗವಹಿಸಿ ಬಹುಮಾನಗಳನ್ನು ಗಳಿಸಿರುವುದು ಅವಳ ವೈಶಿಷ್ಟ್ಯ. ಕ್ರೈಸ್ಟ್ ಯೂನಿವರ್ಸಿಟಿಯ ಶಾಸ್ತ್ರೀಯ ನೃತ್ಯ ತಂಡದ ನೇತೃತ್ವವನ್ನೂ ವಹಿಸಿರುವ ಅಗ್ಗಳಿಕೆ ಶ್ರೇಯಾಳದು. ಕ್ರಿಯಾಶೀಲಳಾಗಿರುವ ಇವಳು, ಕವನಗಳ ರಚನೆ ಮತ್ತು ಅಕಾಡೆಮಿಕ್ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾಳೆ ಕೂಡ. ಸದಾ ಸೃಜನಾತ್ಮಕವಾಗಿ ಆಲೋಚಿಸುವ ಇವಳದು ಸಾಧಕ ಮನಸ್ಸು.
– ವೈ.ಕೆ.ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.