ಧಾರವಾಡ : ಧಾರವಾಡ ರಂಗಾಯಣ ಆವರಣದ ಸಾಂಸ್ಕೃತಿಕ ಸಮುಚ್ಚಯದಲ್ಲಿ ದಿನಾಂಕ 22 ಅಗಸ್ಟ್ 2025 ರವಿವಾರ ಸಂಜೆ ನಡೆದ ಶ್ರಾವಣದ ಕವಿ ಬೇಂದ್ರೆ ವಾಚನ – ಗಾಯನ – ನೃತ್ಯ ಒಂದು ಅಭೂತಪೂರ್ವ ಕಾರ್ಯಕ್ರಮ ಎನಿಸಿ ಹೊಸದೊಂದು ದಾಖಲೆ ಬರೆಯುವಲ್ಲಿ ಯಶಸ್ವಿಯಾಯಿತು.
ವೇದಿಕೆಯಲ್ಲಿ ಬೇಂದ್ರೆಯವರು ಮಾತ್ರ ಇದ್ದರು. ಅವರ ಭಾವಚಿತ್ರ ಮಾತ್ರ ಅಲ್ಲಿತ್ತು. ಕುರ್ಚಿಗಳು ಇರಲಿಲ್ಲ. ಸಂಘಟಕರು, ಉದ್ಘಾಟಕರು ಎಲ್ಲರೂ ವೇದಿಕೆಯ ಎದುರಿಗೆ ಪ್ರೇಕ್ಷಕರ ನಡುವೆ ಆಸೀನರಾಗಿದ್ದರು. ವೇದಿಕೆಯ ಬ್ಯಾನರ್ ಅತ್ಯಂತ ಸೊಗಸಾಗಿ ಕಂಗೊಳಿಸುತ್ತಿತ್ತು. ಬೇಂದ್ರೆಯವರ ವಿವಿಧ ಭಾವಚಿತ್ರಗಳು ಮತ್ತು ಹಸ್ತಾಕ್ಷರ ಪದೇ ಪದೇ ಲಕ್ಷಕೊಟ್ಟು ನೋಡುವಂತೆ ಆಕರ್ಷಣೀಯವಾಗಿದ್ದವು.
ಮನೋಹರ ಗ್ರಂಥಮಾಲೆ, ಜಿ.ಬಿ. ಮೆಮೋರಿಯಲ್ ಟ್ರಸ್ಟ್, ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್, ಮಹಿಪತಿ ಸಾಂಸ್ಕೃತಿಕ ಕೇಂದ್ರ, ಸಕ್ರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್, ಸ್ನೇಹ ಪ್ರತಿಷ್ಠಾನ ಸಂಯುಕ್ತವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಬರೀ ಯುವಕರು ಮಾತ್ರ ಶ್ರಾವಣದ ಕವಿ ಬೇಂದ್ರೆಯವರ ಕವನಗಳನ್ನು ವಾಚಿಸಿದರು, ಹಾಡಿದರು, ನೃತ್ಯ ರೂಪದಲ್ಲಿ ಪ್ರಸ್ತುತ ಪಡಿಸಿದರು.
ಡಾ. ಕೃಷ್ಣ ಕಟ್ಟಿಯವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಬೇಂದ್ರೆಯವರ ಅಸಾಧಾರಣ ಪ್ರತಿಭೆ, ಪಾಂಡಿತ್ಯ ನಮ್ಮ ಕನ್ನಡ ಭಾಷೆಯನ್ನು ಹೇಗೆ ಶ್ರೀಮಂತಗೊಳಿಸಿತು ಎನ್ನುವುದನ್ನು ವಿವರಿಸಿ, ಇಂದಿನ ಯುವಕರು ಸಹ ಬೇಂದ್ರೆಯವರ ಕವಿತೆಗಳನ್ನು, ಇತರ ಸಾಹಿತ್ಯ ಓದಬೇಕು ಅನ್ನುವ ದೃಷ್ಟಿಯಿಂದ ಈ ಕಾರ್ಯಕ್ರಮ ಕೇವಲ ಯುವಕರಿಂದ ಮಾತ್ರ ನಡೆಯಲಿದೆ ಎಂದು ಹೇಳಿದರು.
ಅನನ್ಯ ಪಾಮಡಿ, ಪ್ರಭುದೇವ ಕಿತ್ತೂರ, ದೀಪಾ ಕುಲಕರ್ಣಿ, ಅಭಿಲಾಷ ನಾಯಕ, ಶ್ರುತಿ ಖಾನ, ನರಸಿಂಹ ಪ್ಯಾಟಿ, ಶಿವಾನಿ ಕವಟೇಕರ, ನವಮಿ ಉಪಾಧ್ಯೆ, ಅಶೋಕ ನಿಂಗೋಲಿ, ಸೌಮ್ಯಾ ನೇತ್ರೆಕರ, ಚೈತ್ರಾ ಕಮ್ಮಾರ, ಶ್ರುತಿಪ್ರಿಯಾ ಆರ್. ದೇಶಪಾಂಡೆ, ಡಾ. ವೀಣಾ ಬಡಿಗೇರ, ಡಾ. ಅಮೃತಾ ಪುರಾಣಿಕ, ರಾಘವ ಕಮ್ಮಾರ ಇವರು ಬೇಂದ್ರೆ ಕವಿತೆಗಳನ್ನು ವಾಚಿಸಿದರು ಮತ್ತು ಹಾಡಿದರು.
ವಿದ್ವಾನ್ ರಾಜು ಟೊಣಪಿ ಇವರ ಶಿಷ್ಯರಾದ ಶಿವಾನಿ ಹಂಜಿ, ಗಂಗೋತ್ರಿ ಏಣಗಿ, ಸಮೀಕ್ಷಾ ಶೆಟ್ಟಿ, ಪವಿತ್ರಾ ಮತ್ತೀಹಳ್ಳಿ, ಪ್ರಾಚಿ ಸುಲಾಖೆ ಮತ್ತು ಅನನ್ಯಾ ಹಾವಣಗಿ ಬೇಂದ್ರೆಯವರ ಎರಡು ಕವಿತೆಗಳಿಗೆ ಅತ್ಯುತ್ತಮ ನೃತ್ಯ ರೂಪಕಗಳನ್ನು ಪ್ರಸ್ತುತ ಪಡಿಸಿದರು. ಹರ್ಷ ಡಂಬಳ, ಸುರೇಶ ಕುಲಕರ್ಣಿ ಮತ್ತು ಡಾ. ಹ.ವೆಂ. ಕಾಖಂಡಿಕಿ ಬೇಂದ್ರೆಯವರ ರಸಪ್ರಸಂಗಗಳನ್ನು ಹಂಚಿಕೊಂಡರು. ಡಾ. ಎಸ್.ಎಮ್. ಶಿವಪ್ರಸಾದ, ಸುರೇಶ ಕುಲಕರ್ಣಿ, ಹನುಮೇಶ ಸಕ್ರಿ ಮತ್ತು ಸಮೀರ ಜೋಶಿ ಎಲ್ಲಾ ಕಲಾವಿದರಿಗೆ ಪ್ರಶಸ್ತಿ ಪ್ರಮಾಣಪತ್ರ ವಿತರಿಸಿದರು.
ಡಾ. ಕೃಷ್ಣ ಕಟ್ಟಿ ಅವರು ಮಾತನಾಡುತ್ತಾ ಮುಂದಿನ ವರ್ಷ ಇಡೀ ದಿನ ಕನಿಷ್ಠ ಒಂದು ದಿನ ಶ್ರಾವಣ ಬೇಂದ್ರೆ ಉತ್ಸವ ಆಚರಿಸುವ ಯೋಜನೆ ಹೊಂದಿದ್ದು ಸುಮಾರು ನೂರು ಕಲಾವಿದರು ಇದರಲ್ಲಿ ಭಾಗವಹಿಸಲು ಕೇಳಿಕೊಂಡರು.
ಡಾ. ಹ.ವೆಂ. ಕಾಖಂಡಿಕಿ ಇವರು ಮಾತನಾಡುತ್ತಾ ಬೇಂದ್ರೆಯವರು ಹಿಂದಿ, ಬ್ರಜ್ ಭಾಷೆಯಲ್ಲಿ ರಚಿಸಿರುವ ಹಾಗೆ ಕನ್ನಡದಲ್ಲಿ ಕೂಡ ನೂರಾರು ಚೀಜುಗಳನ್ನು ರಚಿಸಿದ್ದು, ನಮ್ಮ ಕರ್ನಾಟಕದ ಹಾಡುಗಾರರು ಸಹ ಅವುಗಳ ಅಭ್ಯಾಸ ಮಾಡಿ ಪ್ರಸ್ತುತ ಪಡಿಸಬೇಕು ಮತ್ತು ರವೀಂದ್ರ ಸಂಗೀತದ ಹಾಗೆ ಬೇಂದ್ರೆ ಸಂಗೀತ ಕೂಡ ದೇಶವ್ಯಾಪಿ ಪ್ರಚಾರವಾಗಬೇಕು ಎಂದು ಹೇಳಿದರು.
ಸಮಾರೋಪ ನುಡಿಗಳನ್ನು ಆಡಿ ಡಾ.ಶಶಿಧರ ನರೇಂದ್ರ ಇದೊಂದು ಅಪರೂಪದ ಬೇಂದ್ರೆಯವರ ಶ್ರಾವಣ ಸಂಜೆ ಎಂದು ಹೇಳಿ, ಎಲ್ಲಾ ಕಲಾವಿದರಿಗೆ, ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರಿಗೆ ಧನ್ಯವಾದಗಳು ಹೇಳಿದರು. ಡಾ. ಹ.ವೆಂ. ಕಾಖಂಡಿಕಿ ಕಾರ್ಯಕ್ರಮ ನಿರ್ವಹಿಸಿದರು.