ಬಂಟ್ವಾಳ : ಏರ್ಯ ಫೌಂಡೇಶನ್ ವತಿಯಿಂದ ಕರಾವಳಿಯ ಪ್ರಸಿದ್ಧ ಸಾಹಿತಿ, ಸಹಕಾರಿ ಸಂಘಗಳ ಪ್ರಮುಖ ನೇತಾರರಾಗಿದ್ದ ದಿ. ಏರ್ಯ ಲಕ್ಷ್ಮೀನಾರಾಯಣ ಆಳ್ವರವರ ಜನ್ಮಶತಮಾನೋತ್ಸವದ ಅಂಗವಾಗಿ ಕನ್ನಡದ ಹಿರಿಯ ಸಾಹಿತಿ, ರಂಗಕರ್ಮಿ, ನಿವೃತ್ತ ಪ್ರೊ. ನಾ. ದಾಮೋದರ ಶೆಟ್ಟಿ ಹಾಗೂ ಪ್ರಸಿದ್ಧ ಜಾನಪದ ವಿದ್ವಾಂಸ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಇವರಿಗೆ ‘ಏರ್ಯ ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ ಗೌರವ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಸಾಧಕರಿಗೆ ತಲಾ ರೂ. ಒಂದು ಲಕ್ಷ ರೂಪಾಯಿಗಳು, ಪ್ರಶಸ್ತಿ ಫಲಕ, ಅರಸು ಪೇಟ ನೀಡಿ ಸನ್ಮಾನಿಸಲಾಗುವುದು ಎಂದು ಏರ್ಯ ಫೌಂಡೇಶನ್ ತಿಳಿಸಿದೆ.
ಬಂಟ್ವಾಳದ ‘ಏರ್ಯ ಬೀಡುವಿನಲ್ಲಿ’ ದಿನಾಂಕ 28 ಆಗಸ್ಟ್ 2025ರಂದು ನಾಡೋಜ ಪ್ರೊ. ಹಂಪ ನಾಗರಾಜಯ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಇದೇ ಸಂದರ್ಭ ನಾ.ದಾ. ಸಂಪಾದಿತ ‘ಏರ್ಯ ಸಾಹಿತ್ಯ ಮರುಚಿಂತನ’ ಕೃತಿಯನ್ನು ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಬಿ.ಎ. ವಿವೇಕ ರೈ ಅನಾವರಣಗೊಳಿಸುವರು. ಕಾರ್ಯಕ್ರಮವನ್ನು ಆನಂದಿ ಎಲ್. ಆಳ್ವರವರು ದೀಪ ಬೆಳಗಿಸಿ ಉದ್ಘಾಟಿಸುವರು ಎಂದು ಫೌಂಡೇಶನ್ ಅಧ್ಯಕ್ಷ ಏರ್ಯ ಬಾಲಕೃಷ್ಣ ಹೆಗ್ಡೆ ತಿಳಿಸಿದ್ದಾರೆ.