ಮಂಗಳೂರು : ಮಂಗಳೂರು ಸಂಸ್ಕೃತ ಸಂಘ ಹಾಗೂ ಸರೋಜಿನಿ ಮಧುಸೂಧನ ಕುಶೆ ಶಿಕ್ಷಣ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ದಿನಾಂಕ 23 ಆಗಸ್ಟ್ 2025ರಂದು ಅತ್ತಾವರದಲ್ಲಿರುವ ಸರೋಜಿನೀ ಮಧುಸೂದನ ಕುಶೆ ಶಿಕ್ಷಣ ಸಂಸ್ಥೆಯಲ್ಲಿ ‘ಸಂಸ್ಕೃತೋತ್ಸವ ಮತ್ತು ಸನ್ಮಾನ’ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಸಂಸ್ಕೃತೋತ್ಸವದ ಅಂಗವಾಗಿ ನಡೆಯುವ ವಿವಿಧ ಸಂಸ್ಕೃತ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕೃತ ಸಂಘದ ಗೌರವಾಧ್ಯಕ್ಷ ಶ್ರೀ ಕೆ.ಪಿ. ವಾಸುದೇವರಾವ್ ವಹಿಸಿದ್ದರು. ಆಕಾಶವಾಣಿ ಮಂಗಳೂರು ಇಲ್ಲಿಯ ನಿವೃತ್ತ ಸಹಾಯಕ ನಿರ್ದೇಶಕರಾದ ಶ್ರೀ ಸೂರ್ಯನಾರಾಯಣ ಭಟ್ ಮಾತನಾಡಿ “ಸಂಸ್ಕೃತ ಎನ್ನುವುದು ತಾಯಿ ಭಾಷೆ, ತಾಯಿಯನ್ನು ಎಷ್ಟು ಪ್ರೀತಿಸುತ್ತೇವೆಯೋ ಅಷ್ಟೇ ಪ್ರೀತಿ ಈ ಭಾಷೆಯ ಬಗ್ಗೆ ಇರಬೇಕು. ನಮ್ಮ ಪುರಾಣ, ರಾಮಾಯಣ, ಮಹಾಭಾರತ ಸಂಸ್ಕೃತದಲ್ಲಿದೆ, ಹಾಗಾಗಿ ಇಂತಹ ವಿಶೇಷವಾದ ಭಾಷೆಯನ್ನು ಕಲಿಯುವ ಪ್ರಯತ್ನ ಪ್ರತಿಯೊಬ್ಬರು ಅವಶ್ಯವಾಗಿ ಮಾಡಬೇಕು. ಸಂಸ್ಕೃತ ಎನ್ನುವುದು ಭಾಷೆಯಾಗದೆ ಜೀವನದ ಒಂದು ಭಾಗವಾಗಬೇಕು” ಎಂದು ಹೇಳಿದರು.
ಸರೋಜಿನಿ ಮಧುಸೂದನ ಕುಶೆ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಬಿಂದುಸಾರ ಶೆಟ್ಟಿಯವರು ವಿಶೇಷವಾಗಿ ಸಂಸ್ಕೃತದಲ್ಲಿಯೇ ಭಾಷಣವನ್ನು ಆರಂಭ ಮಾಡಿ, ಸಂಸ್ಕೃತ ಭಾಷೆಯ ಅವಶ್ಯಕತೆ ಮತ್ತು ಮಹತ್ವವನ್ನು ಸಾರಿದರು. ಕಾರ್ಯಕ್ರಮದಲ್ಲಿ ಕುಶೆ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಅಧಿಕಾರಿಗಳು ಶ್ರೀ ಮುರಳಿಧರ್ ರಾವ್, ಸಂಸ್ಕೃತ ಸಂಘದ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಮಧ್ಯಸ್ಥರು, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ರಮೇಶ್ ಆಚಾರ್ಯ, ಉಪಪ್ರಾಂಶುಪಾಲೆಯಾದ ಶ್ರೀಮತಿ ಪವಿತ್ರಾ, ಉಪ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಸೌಜನ್ಯಾ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ಶ್ರೀ ವೆಂಕಟರಮಣ ಭಟ್ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮದ ನಿರೂಪಣೆಯನ್ನು ಮುರಾರಿ ತಂತ್ರಿ ಹಾಗೂ ಧನ್ಯವಾದವನ್ನು ಸಂಯೋಜಕರಾದ ಶ್ರೀಪತಿ ಭಟ್ ನೆರವೇರಿಸಿದರು.