ಸಿಂಗಾಪುರ : ಸದಾ ಚಟುವಟಿಕೆಯಿಂದಿರುವ ಸಿಂಗಾಪುರ ಕನ್ನಡ ಸಂಘ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ವಿನೋದ, ಶುಭ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹಿಸುವ ಹಾಗೂ ಸಿಂಗಾಪುರದ ಕನ್ನಡ ಸಮುದಾಯ ಹಾಗೂ ಇಲ್ಲಿನ ಇತರ ಸಮುದಾಯದ ಜೊತೆ ಸಾಂಸ್ಕೃತಿಕ ಸಂಬಂಧವನ್ನು ಬೆಳೆಸುವುದು, ಜಗತ್ತಿನ ವಿವಿಧೆಡೆಯಲ್ಲಿರುವ ಕನ್ನಡಿಗರೊಡನೇ ಸಾಂಸ್ಕೃತಿಕ ಸಂಬಂಧವನ್ನು ಕಲ್ಪಿಸುವ ಒಂದು ಸುಂದರ ತಂಡ. ಬೆಂಗಳೂರಿನಲ್ಲಿ ಮನೆ ಮಾತಾಗಿರುವ ಕಳೆದ ನಾಲ್ಕುವರೆ ದಶಕಗಳಿಂದ ಗುಣಾತ್ಮಕ ಯಕ್ಷಗಾನ ಪ್ರದರ್ಶನ, ಆಸಕ್ತರಿಗಾಗಿ ನಿರಂತರ ಯಕ್ಷಗಾನ ತರಬೇತಿ, ಯಕ್ಷಗಾನದ ಕುರಿತಾದ ಕಮ್ಮಟ, ಕಾರ್ಯಾಗಾರ, ಯಕ್ಷಾಂತರಂಗವನ್ನು ಸಮಗ್ರವಾಗಿ ಪರಿಚಯಿಸುವ ಪ್ರಾತ್ಯಕ್ಷಿಕೆ, ತಾಳಮದ್ದಲೆ, ಹೂವಿನ ಕೋಲು, ಗಾನವೈಭವ, ಪ್ರತಿವರ್ಷ ಸಾಧಕ ಕಲಾವಿದರನ್ನು ಗುರುತಿಸಿ ನಗದು ಪುರಸ್ಕಾರದೊಂದಿಗೆ ‘ಯಕ್ಷದೇಗುಲ’ ಪ್ರಶಸ್ತಿ, ಯಕ್ಷಗಾನ ಉತ್ಸವ, ಪುಸ್ತಕ ಪ್ರಕಟಣೆ, ಯಕ್ಷಾಭ್ಯಾಸ ಹೀಗೆ ಸದಾ ಚಟುವಟಿಕೆಯಿಂದಿರುವ ಸಂಸ್ಥೆಯಾದ ಯಕ್ಷದೇಗುಲ ಸಂಸ್ಥೆ. ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಅನುಪಮ ಕೊಡುಗೆಯನ್ನು ಮನಗಂಡು ‘ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ’, ಉಡುಪಿ ಕಲಾರಂಗ ನೀಡುವ ಶ್ರೀ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ, ಶ್ರವಣ ಬೆಳಗೋಳದಲ್ಲಿ ನೀಡುವ ಎಸ್. ನಾಗರಾಜ್ ಪ್ರಶಸ್ತಿ, ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನದಲ್ಲಿ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳು ಸಂಸ್ಥೆಯ ಮುಡಿಗೇರಿದೆ. ನಾಡಿನಾದ್ಯಂತ ಪ್ರದರ್ಶನ ನೀಡಿರುವುದಲ್ಲದೇ ದೇಶದ ಜಮ್ಮು-ಕಾಶ್ಮೀರ ಹೊರತು ಪಡಿಸಿ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಪ್ರದರ್ಶನಗಳನ್ನು ನೀಡಿದೆ. 2000ನೇ ಇಸವಿಯಲ್ಲಿ ಕರ್ನಾಟಕ ಸರಕಾರ ಅಮೇರಿಕ ಮತ್ತು ಯು.ಕೆ.ಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನಕ್ಕೆ ಕಾರ್ಯಕ್ರಮ ನೀಡಲು ತಂಡವನ್ನು ಆಯ್ಕೆ ಮಾಡಿದೆ.
ಹೀಗೆ ಸದಾ ಸೃಜನಾತ್ಮಕ ಚಟುವಟಿಕೆಗಳಿಂದ ಕೂಡಿ ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಒತ್ತಿದ ತಂಡವಾದ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ದಿನಾಂಕ 30 ಆಗಸ್ಟ್ 2025ರಂದು ಸಿಂಗಾಪುರದ ಆರೆಂಜ್ ಗ್ರೂವ್ ರೋಡ್, ಆರ್.ಇ.ಎಲ್.ಸಿ. ಇಂಟನ್ಯಾಷನಲ್ ಹೋಟೆಲ್‌ನ ಸಭಾಂಗಣದಲ್ಲಿ ಸಂಜೆ 6-00 ಗಂಟೆಗೆ ‘ರತ್ನಾವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಮತ್ತು ದಿನಾಂಕ 31 ಆಗಸ್ಟ್ 2025ರಂದು ಬೆಳಿಗ್ಗೆ 9-00 ಗಂಟೆಗೆ ಯಕ್ಷಗಾನದ ವಾಚಿಕ, ಅಂಗಿಕ, ಸಾತ್ವಿಕ, ಆಹಾರ್ಯಗಳನ್ನೊಳಗೊಂಡ ‘ಯಕ್ಷಾಂತರಂಗ’ವನ್ನು ಹೊಸ ತಲೆಮಾರಿನವರಿಗೆ ಪರಿಚಯಿಸುವ ಯಕ್ಷದೇಗುಲದ ಪರಿಕಲ್ಪನೆಯ ‘ಯಕ್ಷಗಾನ ಪ್ರಾತ್ಯಕ್ಷಿಕೆ’ಯು ಎಸ್.ಪಿ. ಜೈನ್ ಶಾಲಾ ಪ್ರಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕಲಾವಿದರಾಗಿ ಕೋಟ ಸುದರ್ಶನ ಉರಾಳ, ಪ್ರಿಯಾಂಕ ಕೆ. ಮೋಹನ್, ಲಂಬೋದರ ಹೆಗಡೆ, ಸುಜಯೀಂದ್ರ ಹಂದೆ, ಉದಯ ಹೆಗಡೆ ಕಡಬಾಳ, ದಿನೇಶ್ ಕನ್ನಾರ್, ವಿಶ್ವನಾಥ ಉರಾಳ, ಸುದೀಪ ಉರಾಳ, ಶ್ರೀರಾಮ ಹೆಬ್ಬಾರ್, ಶ್ರೀವತ್ಸ ಅಡಿಗ ಮತ್ತು ಶ್ರೀವಿದ್ಯಾರವರು ಭಾಗವಹಿಸಲಿದ್ದಾರೆಂದು ಕನ್ನಡ ಸಂಘ (ಸಿಂಗಾಪುರ)ದ ಅಧ್ಯಕ್ಷರಾದ ವೆಂಕಟೇಶ್ ಗೆದ್ದೆಮನೆಯವರು ತಿಳಿಸಿದ್ದಾರೆ.