ಬೆಂಗಳೂರು : ಪ್ರಸಿದ್ಧ ‘ಸಾಧನ ಸಂಗಮ ಡಾನ್ಸ್ ಸೆಂಟರ್’ನ ನೃತ್ಯ ಗುರುದ್ವಯರಾದ ವಿದುಷಿ ಜ್ಯೋತಿ ಪಟ್ಟಾಭಿರಾಮ್ ಮತ್ತು ಡಾ. ಸಾಧನಶ್ರೀ ಇವರ ಕಾಳಜಿಪೂರ್ಣ ಭರತನಾಟ್ಯ ಮಾರ್ಗದರ್ಶನದಲ್ಲಿ ರೂಪುಗೊಂಡ ನೃತ್ಯಪ್ರತಿಭೆ ಕುಮಾರಿ ಪಿ. ಗುಣಶ್ರೀ ಬಹುಮುಖ ಪ್ರತಿಭೆ. ಸಂಗೀತ -ನಾಟ್ಯಗಳಲ್ಲಿ ಭರವಸೆಯ ಅಡಿಗಳನ್ನಿಡುತ್ತಿರುವ ಗುಣಶ್ರೀ ಬೆಂಗಳೂರಿನ ಎಸ್. ಪುಟ್ಟಸ್ವಾಮಿ ಮತ್ತು ಟಿ. ಸವಿತಾ ದಂಪತಿಗಳ ಪುತ್ರಿಯಾಗಿದ್ದು, ಕಳೆದ ಹನ್ನೆರಡು ವರ್ಷಗಳಿಂದ ಸತತ ಅಭ್ಯಾಸ- ಪರಿಶ್ರಮಗಳಿಂದ ನೃತ್ಯ ಕಲಿಯುತ್ತಿದ್ದಾಳೆ. ಇವಳು ಗಂಧರ್ವ ಮಹಾಮಂಡಲದ 5 ಹಂತದ ಪರೀಕ್ಷೆಗಳಲ್ಲಿ ಉತ್ತಮಾಂಕಗಳಿಂದ ತೇರ್ಗಡೆಯಾಗಿರುವುದಲ್ಲದೆ, ಕರ್ನಾಟಕ ಸರ್ಕಾರದ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ ಡಿಸ್ಟಿಂಕ್ಷನ್ ಪಡೆದ ಹಿರಿಮೆ ಇವಳದು. ಬಿ.ಕಾಂ. ಫೈನಲ್ ತರಗತಿಯಲ್ಲಿ ಓದುತ್ತಿರುವ ಗುಣಶ್ರೀ, ಕವಿತಾ ರಚನೆ, ಚಿತ್ರಕಲೆ, ಯೋಗ ಮತ್ತು ಕ್ರೀಡೆಯಲ್ಲೂ ಮುಂದಿದ್ದು, 20 ಸಂಶೋಧನಾ ಪ್ರಬಂಧಗಳನ್ನು ಬರೆದು ಮಂಡಿಸಿರುವುದು ಇವಳ ವೈಶಿಷ್ಟ್ಯ. ನಾಡಿನಾದ್ಯಂತ ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿ ‘ಸಾಧನ ಸಂಗಮ’ದ ‘ನೃತ್ಯ ನಿಪುಣ’ ತಂಡದ ಭಾಗವಾಗಿರುವ ಗುಣಶ್ರೀ, ಇದೀಗ ‘ನೃತ್ಯಸುಗುಣ’ ಎಂಬ ವಿಶಿಷ್ಟ ಶೀರ್ಷಿಕೆಯಲ್ಲಿ ತನ್ನ ರಂಗಪ್ರವೇಶಕ್ಕೆ ಸಿದ್ಧಗೊಂಡಿದ್ದಾಳೆ. ವಿಜಯನಗರದ ‘ಕಾಸಿಯಾ’ ಸಭಾಂಗಣದಲ್ಲಿ ದಿನಾಂಕ 31 ಆಗಸ್ಟ್ 2025 ಭಾನುವಾರ ಬೆಳಗ್ಗೆ 10-00 ಗಂಟೆಗೆ ತನ್ನ ನರ್ತನ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾಳೆ. ಅತ್ಯುತ್ಸಾಹದಿಂದ ರಂಗಪ್ರವೇಶಕ್ಕೆ ಅಣಿಯಾಗಿರುವ ಗುಣಶ್ರೀಯ ಈ ನೃತ್ಯವೈಭವವನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೆ ಸುಸ್ವಾಗತ.
ಕುಮಾರಿ ಗುಣಶ್ರೀಗೆ ನೃತ್ಯ ಬಾಲ್ಯದ ಒಲವು. ಎಳವೆಯಲ್ಲೇ ‘ಸಾಧನ ಸಂಗಮ’ ನೃತ್ಯಶಾಲೆಗೆ ಸೇರಿ ಕಳೆದ ಹನ್ನೆರಡು ವರ್ಷಗಳಿಂದ ಅತೀವ ಪರಿಶ್ರಮ-ಶ್ರದ್ಧೆಗಳಿಂದ ಭರತನಾಟ್ಯ ನೃತ್ಯ ಕಲಿತು ನಾಡಿನಾದ್ಯಂತ ಪ್ರದರ್ಶನ ನೀಡಿದ್ದಾಳೆ. ಸಾಧನ ಸಂಗಮದ ಮುಕುಲ-ಯುಗಳ – ಬಹುಳ ವಾರ್ಷಿಕ ಉತ್ಸವ, ನೃತ್ಯ ಸಮಾಗಮ ಮತ್ತು ನೃತ್ಯ ನಿರಂತರ ಮುಂತಾದ ಅನೇಕ ಪ್ರಮುಖ ಕಾರ್ಯಕ್ರಮಗಳಲ್ಲಿ ನೃತ್ಯಪ್ರದರ್ಶನ ನೀಡಿ, ಸಾಧನ ಸಂಗಮದ ‘ನೃತ್ಯ ನಿಪುಣ ಡಾನ್ಸ್ ಎನ್ಸೆಮ್ಬಲ್’ ಗುಂಪಿನಲ್ಲಿರುವ ಗುಣಶ್ರೀ ನಾಡಿನ ವಿವಿಧ ನೃತ್ಯೋತ್ಸವ-ನೃತ್ಯರೂಪಕಗಳಲ್ಲಿ ಪಾತ್ರವನ್ನು ವಹಿಸಿ ಕಲಾರಸಿಕರ ಗಮನ ಸೆಳೆದಿದ್ದಾಳೆ. ಅವುಗಳಲ್ಲಿ ಮುಖ್ಯವಾದವು- ಉಡುಪಿ ಮಠದ ಶ್ರೀಕೃಷ್ಣ ಮಾಸೋತ್ಸವ, ಮೈಸೂರಿನ ಕಲೆಮನೆ ಫೆಸ್ಟಿವಲ್, ಐ.ಬಿ.ಎಂ. ಅನ್ಯುಯಲ್ ಮೀಟ್, ದಸರಾ ಉತ್ಸವ ಮುಂತಾದವುಗಳು.
ಬಾಲಪ್ರತಿಭೆಯಾದ ಗುಣಶ್ರೀ ಓದಿನಲ್ಲೂ ಮಹಾಜಾಣೆ, ಚುರುಕುಮತಿ. ತಾನು ಓದಿದ ಕೇಂದ್ರೀಯ ವಿದ್ಯಾಲಯದಲ್ಲಿ ಸಿ.ಬಿ.ಎಸ್.ಇ. 10ನೇ ಗ್ರೇಡ್ ನಲ್ಲಿ ಶೇ.94% ಮತ್ತು 12ನೇ ತರಗತಿಯಲ್ಲಿ ಶೇ.90% ಅಂಕಗಳನ್ನು ಗಳಿಸಿದ ಅಗ್ಗಳಿಕೆ ಅವಳದು. ಬಹುಮುಖ ಪ್ರತಿಭೆಯಾದ ಇವಳು ಶಾಲೆ ಮತ್ತು ಕಾಲೇಜಿನ ಹಾಗೂ ಅಂತರ ಶಾಲಾ-ಕಾಲೇಜು ನೃತ್ಯ ಸ್ಪರ್ಧೆಗಳಲ್ಲಿ, ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬಹುಮಾನಗಳನ್ನು ಸೂರೆಗೊಂಡ ವಿಶೇಷತೆ ಇವಳದು. ಪ್ರಾದೇಶಿಕ ಯೋಗಸ್ಪರ್ಧೆಗಳಲ್ಲದೆ, ಕಬ್ಬಡಿ ಆಟದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಾಳೆ. ಪ್ರಸ್ತುತ ಪಿ.ಇ.ಎಸ್. ಯೂನಿವರ್ಸಿಟಿಯಲ್ಲಿ ಅಂತಿಮ ವರ್ಷದ ಬಿ.ಕಾಂ. ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ಈ ನೃತ್ಯ ಕಲಾವಿದೆಯ ‘ರಂಗಪ್ರವೇಶ’ಕ್ಕೆ ಅಭಿನಂದನೆಗಳು.
** ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.