ಪುತ್ತೂರು : ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿ ಸಂಸ್ಕೃತ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಸಂಸ್ಕೃತ ಸಂಘ, ವಿವೇಕಾನಂದ ಸಂಶೋಧನಾ ಕೇಂದ್ರ, ಸೌರಭ ಪ್ರಸಾರಾಂಗ ಹಾಗೂ ಐಕ್ಯೂಎಸಿಯ ಸಹಯೋಗದಲ್ಲಿ ನಡೆದ ‘ಭಾರತಿಯ ಜೀವನ ದರ್ಶನ’ ಪ್ರವಚನ ಮಾಲಿಕೆ ಕಾರ್ಯಕ್ರಮ ದಿನಾಂಕ ದಿನಾಂಕ 22 ಆಗಸ್ಟ್ 2025ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರು ಅಂಭ್ರಣೀ ಗುರುಕುಲದ ನಿರ್ದೇಶಕರಾದ ಡಾ. ಬೆ. ನಾ. ವಿಜಯೀಂದ್ರ ಆಚಾರ್ಯ ಮಾತನಾಡಿ “ನಮ್ಮಲ್ಲಿರುವ ಭಾವನೆಗಳನ್ನು ಜಾಗೃತವಾಗಿಡಲು ಆಧ್ಯಾತ್ಮಿಕ ಜ್ಞಾನ ಸಹಕಾರಿ. ಕಣ್ಣು, ಕಿವಿ ಮುಂತಾದ ಪಂಚೇಂದ್ರಿಯಗಳಿಗೆ ಅದರದ್ದೇ ಆದ ಮಹತ್ವ ಇದೆ. ಅದರ ಸಮರ್ಥ ಬಳಕೆಯಿಂದ ನಾವು ಪ್ರತಿ ವಿಚಾರಗಳ ಬಗ್ಗೆ ವಿಮರ್ಶೆ ಮಾಡಿ ಮುಂದುವರಿಯಬೇಕು. ಮಾನವರ ಬದುಕು ತಿಳಿಯುವುದಕ್ಕಾಗಿ ಇದೆ. ಭಾರತದಲ್ಲಿ ಜನ್ಮ ಪಡೆದಾಗ ಸ್ವರ್ಗ ಪ್ರಾಪ್ತಿಯ ಫಲ ಎಂಬುದು ನಂಬಿಕೆ. ಸಂಕಷ್ಟದ ಸಂದರ್ಭ ಅದನ್ನು ಪರಿಹರಿಸಿ ಮೇಲೇಳುವ ದೇಶ ಇದು. ಹೀಗಿರುವ ದೇಶದಲ್ಲಿ ಯುವ ಸಮಾಜ ಧರ್ಮ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಬೇಕು ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ “ತರಗತಿಯಲ್ಲಿ ಪಡೆದುಕೊಂಡ ಜ್ಞಾನವೂ ಅತೀ ಮುಖ್ಯವಾಗಿರುತ್ತದೆ. ಇದರ ಜೊತೆಗೆ ಹಿರಿಯರು ಹೇಳಿದ ಮಾತುಗಳನ್ನು ಬದುಕಿನಲ್ಲಿ ಅಗತ್ಯವಾಗಿ ಅಳವಡಿಸಿಕೊಳ್ಳಬೇಕು ” ಎಂದರು. ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ. ಎನ್. ಶುಭಹಾರೈಸಿದರು. ಈ ಸಂದರ್ಭದಲ್ಲಿ ಡಾ. ಬೆ.ನಾ. ವಿಜಯೀಂದ್ರ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಸಂಸ್ಕೃತ ಸಂಘದ ಲಾಂಛನವನ್ನು ಲೋಕಾರ್ಪಣೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ಶುಭಾ ಅಡಿಗ, ಪ್ರಾಂಶುಪಾಲ ಡಾ. ಶ್ರೀಧರ ನಾಯಕ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಶ ಕುಮಾರ ಯಂ.ಕೆ ಸ್ವಾಗತಿಸಿ, ಸಂಸ್ಕೃತ ಸಂಘದ ಜೊತೆ ಕಾರ್ಯದರ್ಶಿ ಅನರ್ಘ್ಯಾ.ಜಿ ನಿರೂಪಿಸಿ, ಸಂಸ್ಕೃತ ಸಂಘದ ಅಧ್ಯಕ್ಷೆ ಪ್ರಣತಿ.ಕೆ ವಂದಿಸಿದರು.