ಮಂಗಳೂರು: ಭರತಾಂಜಲಿ ಕೊಟ್ಟಾರ ಮಂಗಳೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶ್ರೀ ಕ್ಷೇತ್ರ ಗಣೇಶಪುರ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭ ಹಮ್ಮಿಕೊಂಡ, ‘ನೃತ್ಯಾರ್ಪಣಂ’ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಧಾರ್ಮಿಕ ಚಿಂತಕ ಶ್ರೀ ಸುಧಾಕರ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಭರತನಾಟ್ಯವು ಭಾರತದ ಅತ್ಯಂತ ಪುರಾತನ ಶಾಸ್ತ್ರೀಯ ಪ್ರಕಾರ. ಅನೇಕ ಇತರ ಶಾಸ್ತ್ರೀಯ ನೃತ್ಯ ಪ್ರಕಾರಗಳ ತಾಯಿ ಎಂದು ಪರಿಗಣಿಸಲಾಗಿದೆ. ನಾಟ್ಯಕಲೆಯ ಸತತ ಅಭ್ಯಾಸದಿಂದ ಮನುಷ್ಯನ ಚಿತ್ತ ಶುದ್ದಿಯಾಗಿ ದೇಹ ಸೌಂದರ್ಯ ರೂಪಗೊಳ್ಳುವುದು ಇಂತಹ ಶ್ರೇಷ್ಠವಾದ ನಾಟ್ಯಕಲೆಯನ್ನು ಆರಾಧನಾ ಭಾವದಿಂದ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಮಹತ್ತರ ಕೆಲಸ ನಮ್ಮಿಂದಾಗಬೇಕು” ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀ ಧರ್ಮೇಂದ್ರ ಗಣೇಶಪುರ “ಭರತನಾಟ್ಯ ಕಲೆಯು ಮನುಷ್ಯನಿಗೆ ಉತ್ತಮ ಮಾರ್ಗ ತೋರಿಸಲು ಸಹಾಯವಾಗುತ್ತದೆ” ಎಂದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀ ಸುಕುಮಾರ್ ಭಂಡಾರಿ, ಶ್ರೀ ವಾದಿರಾಜ ರಾವ್, ಭರತಾಂಜಲಿಯ ನೃತ್ಯಗುರು ವಿದುಷಿ ಪ್ರತಿಮಾ ಶ್ರೀಧರ್ ಮತ್ತು ಶ್ರೀಯುತ ಮಂಜುನಾಥ ಪೂಜಾರಿ ಉಪಸ್ಥಿತರಿದ್ದರು. ಕಲಾಸಂಘಟಕ ವಿದ್ವಾನ್ ಶ್ರೀಧರ ಹೊಳ್ಳ ಸ್ವಾಗತಿಸಿ, ಶ್ರೀ ಚಂದ್ರಹಾಸ್ ಶೆಟ್ಟಿಗಾರ ವಂದಿಸಿದರು. ಭರತಾಂಜಲಿಯ ವಿದ್ಯಾರ್ಥಿಗಳಿಂದ ‘ನೃತ್ಯಾರ್ಪಣಂ’ ಕಾರ್ಯಕ್ರಮ ಸಂಪನ್ನಗೊಂಡು ಎಲ್ಲರಿಂದ ಮೆಚ್ಚುಗೆ ಪಡೆಯಿತು.