ಮಂಗಳೂರು : ಹರಿಕಥಾ ಪರಿಷತ್ (ರಿ) ಮಂಗಳೂರು ಇವರು ಸಂತ ಭದ್ರಗಿರಿ ಅಚ್ಯುತದಾಸರಿಗೆ ಮೂವತ್ತು ವರ್ಷಗಳ ಕಾಲ ತಬ್ಲಾ ಸಾಥ್ ನೀಡಿದ ಪ್ರಸಿದ್ಧ ತಬ್ಲಾವಾದಕರೂ, ವೈದಿಕರೂ, ಕೊಡಿಯಾಲ್ ಬೈಲ್ ಲಕ್ಷ್ಮೀನಾರಾಯಣಿ ದೇವಸ್ಥಾನದ ಪ್ರಧಾನ ಅರ್ಚಕರೂ ಆಗಿದ್ದ ಕೀರ್ತಿಶೇಷ ವಿದ್ವಾನ್ ಎಂ. ಲಕ್ಷ್ಮೀನಾರಾಯಣ ಭಟ್ ಇವರ ಸಂಸ್ಮರಣಾರ್ಥ ಆಯೋಜಿಸುವ ಹರಿಕಥಾ ಸಪ್ತಾಹವು ದಿನಾಂಕ 30 ಆಗಸ್ಟ್ 2025ರಿಂದ 05 ಸೆಪ್ಟೆಂಬರ್ 2025ರ ವರೆಗೆ ಪ್ರತೀದಿನ ಸಂಜೆ ಗಂಟೆ 6ರಿಂದ ಮಂಗಳೂರಿನ ಶರವು ರಸ್ತೆಯಲ್ಲಿರುವ ಶ್ರೀ ರಾಧಾಕೃಷ್ಣ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ದಿನಾಂಕ 30 ಆಗಸ್ಟ್ 2025ರಂದು ಅಪರಾಹ್ನ ಗಂಟೆ 4.30ಕ್ಕೆ ಯುವಕೀರ್ತನಕಾರೆ ಕು. ಗಾಯತ್ರೀ ಆಚಾರ್ಯ ಕೊಂಡೆವೂರು ಇವರಿಂದ ‘ಕನಕನಿಗೊಲಿದ ಗೋವಿಂದ’ ಹರಿಕಥೆ ನಡೆಯಲಿದ್ದು, ಬಳಿಕ ಹರಿಕಥಾ ಪರಿಷತ್ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಕೆ. ಮಹಾಬಲ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾಕಾರ್ಯಕ್ರಮವನ್ನು ಶ್ರೀರಾಧಾಕೃಷ್ಣ ದೇವಸ್ಥಾನ ಶರವು ರಸ್ತೆ ಮಂಗಳೂರು ಇಲ್ಲಿನ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಎಂ. ನಾರಾಯಣ ಭಟ್ ದೀಪ ಪ್ರಜ್ವಲಿಸಿ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಪ್ರದೀಪ ಕುಮಾರ್ ಕಲ್ಕೂರ, ಕರ್ನಾಟಕ ಸರಕಾರದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಎಂ. ಎಸ್. ಗುರುರಾಜ್, ಇಲೆಕ್ಟ್ರೋಬಿಟ್ ಆಟೋಮೋಟಿವ್ ಜಿ. ಎಂ. ಬಿ. ಎಚ್. ಜರ್ಮನಿ ಇಲ್ಲಿನ ಸೀನಿಯರ್ ಆರ್ಕಿಟೆಕ್ಟ್ ಆಗಿರುವ ಶ್ರೀ ಅನಂತಕೃಷ್ಣ ಭಟ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ದಿ. ಎಂ. ಲಕ್ಷ್ಮೀನಾರಾಯಣ ಭಟ್ ಅವರ ಬಗ್ಗೆ ‘ನುಡಿ ನಮನ’ ಪುಸ್ತಕ ಲೋಕರ್ಪಣೆಗೊಳ್ಳಲಿದ್ದು, ಷಡ್ಜ ಕಲಾ ಕೇಂದ್ರ ಟ್ರಸ್ಟ್ ಬೆಂಗಳೂರು ಇದರ ಸಂಚಾಲಕರಾದ ಡಾ. ದತ್ತಾತ್ರೇಯ ಎಲ್. ವೇಲಣಕರ್ ಪುಸ್ತಕ ಪರಿಚಯ ಮಾಡಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಪಂಡಿತ್ ದತ್ತಾತ್ರೇಯ ಎಲ್. ವೇಲಣಕರ್, ಬೆಂಗಳೂರು ಇವರಿಂದ ‘ಶ್ರೀದೇವೀ ಮಹಾತ್ಮೆ’ ಹರಿಕಥೆ ನಡೆಯಲಿದೆ.
ದಿನಾಂಕ 31 ಆಗಸ್ಟ್ 2025 ಭಾನುವಾರದಂದು ಹರಿದಾಸ ಡಾ. ಎಸ್.ಪಿ. ಗುರುದಾಸ್ ಮಂಗಳೂರು ಇವರಿಂದ ‘ಶ್ರೀಕೃಷ್ಣ ಕಾರುಣ್ಯ’ ಹರಿಕಥೆ ನಡೆಯಲಿದ್ದು, ಶ್ರೀ ಶನಿವಾರ ದೇವಸ್ಥಾನ ಮಠದಕಣಿ ಇಲ್ಲಿನ ಪ್ರಧಾನ ಅರ್ಚಕರಾದ ಶ್ರೀ ವಿದ್ಯಾಶಂಕರ ಬೋಳೂರು ಇವರು ದೀಪಪ್ರಜ್ವಲನೆಗೈಯ್ಯಲಿದ್ದಾರೆ.
ದಿನಾಂಕ 1 ಸೆಪ್ಟೆಂಬರ್ 2025 ಸೋಮವಾರದಂದು ಹರಿದಾಸ ಶ್ರೀ ತೋನ್ಸೆ ಪುಷ್ಕಳ ಕುಮಾರ್ ಇವರಿಂದ ‘ಸಂತ ಸಕ್ಕೂಬಾಯಿ’ ಹರಿಕಥೆ ನಡೆಯಲಿದ್ದು, ಎ. ಜಿ. ಜ್ಯುವೆಲ್ಲರಿ ವರ್ಕ್ಸ್ ಮಂಗಳೂರು ಇದರ ಶ್ರೀ ಎ.ಜಿ. ಸದಾಶಿವ ಮಂಗಳಾದೇವಿ ದೀಪಪ್ರಜ್ವಲನೆಗೈಯ್ಯಲಿದ್ದಾರೆ.
ದಿನಾಂಕ 2 ಸೆಪ್ಟೆಂಬರ್ 2025 ಮಂಗಳವಾರದಂದು ಹರಿದಾಸೆ ಶ್ರೀಮತಿ ಮಂಜುಳಾ ಜಿ. ರಾವ್ ಇರಾ ಇವರಿಂದ ‘ಭಕ್ತ ಪ್ರಹ್ಲಾದ’ ಹರಿಕಥೆ ನಡೆಯಲಿದ್ದು, ಶ್ರೀಮತಿ ಶೋಭಾ ಹಾಗೂ ಶ್ರೀ ರವೀಂದ್ರರಾವ್ ಮಂಗಳೂರು ಇವರು ದೀಪಪ್ರಜ್ವಲನೆಗೈಯ್ಯಲಿದ್ದಾರೆ.
ದಿನಾಂಕ 3 ಸೆಪ್ಟೆಂಬರ್ 2025 ಬುಧವಾರದಂದು ಹರಿದಾಸ ಶ್ರೀ ವೈ. ಅನಂತಪದ್ಮನಾಭ ಭಟ್ ಕಾರ್ಕಳ ಇವರಿಂದ ‘ವಾಲಿ ಮೋಕ್ಷ’ ಹರಿಕಥೆ ನಡೆಯಲಿದ್ದು, ಶ್ರೀ ಶ್ರೀನಿವಾಸ ಭಟ್ ಅಳಪೆ ಮಂಗಳೂರು ಇವರು ದೀಪಪ್ರಜ್ವಲನೆಗೈಯ್ಯಲಿದ್ದಾರೆ.
4 ಸೆಪ್ಟೆಂಬರ್ 2025 ಗುರುವಾರದಂದು ಹರಿದಾಸ ಶ್ರೀ ಶಂ. ನಾ. ಆಡಿಗ ಕುಂಬ್ಳೆ ಇವರಿಂದ ‘ಯೋಗಕ್ಷೇಮಂ ಮಹಾಯಮ್ಯಹಂ’ ಹರಿಕಥೆ ನಡೆಯಲಿದ್ದು, ಬಿಜೈ ಮಂಗಳೂರಿನ ಉದ್ಯಮಿಗಳಾದ ಶ್ರೀ ದಾಮೋದರ ರೈ ಇವರು ದೀಪಪ್ರಜ್ವಲನೆಗೈಯ್ಯಲಿದ್ದಾರೆ.
ದಿನಾಂಕ 5 ಸೆಪ್ಟೆಂಬರ್ 2025 ಶುಕ್ರವಾರ ಸಂಜೆ ಗಂಟೆ 5.00ಕ್ಕೆ ಹರಿಕಥಾ ಪರಿಷತ್ ಮಂಗಳೂರು ಇದರ ಗೌರವಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಶ್ರೀರಾಧಾಕೃಷ್ಣ ದೇವಸ್ಥಾನ ಶರವುರಸ್ತೆ ಮಂಗಳೂರು ಇಲ್ಲಿನ ಅರ್ಚಕರಾದ ವೇದಮೂರ್ತಿ ಶ್ರೀ ಎಂ. ಗಿರಿಧರ ಭಟ್, ಶ್ರೀಮತಿ ವಿಜಯಲಕ್ಷ್ಮೀ ಎಲ್. ಭಟ್ ಮಂಗಳೂರು, ಎಸ್. ಎಲ್. ಶೇಟ್ ಡೈಮಂಡ್ ಹೌಸ್ ಲೇಡಿಹಿಲ್ ಇದರ ಮಾಲಕರಾದ ಶ್ರೀ ಎಂ. ರವೀಂದ್ರ ಶೇಟ್, ಎಸ್. ಕೆ. ಗೋಲ್ಡ್ ಸ್ಮಿತ್. ಇಂಡಸ್ಟ್ರಿಯಲ್. ಕೋ-ಅಪರೇಟಿವ್ ಸೊಸೈಟಿ ಲಿ.. ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಉಪೇಂದ್ರ ಆಚಾರ್ಯ ಪೆರ್ಡೂರು, ವಿಜಯ ಬ್ಯಾಂಕ್ ಇದರ ನಿವೃತ್ತ ಸೀನಿಯರ್ ಮೇನೇಜರ್ ಆದ ಶ್ರೀ ಬೆಟ್ಟಂಪಾಡಿ ಸುಂದರ ಶೆಟ್ಟಿ ಇವರೆಲ್ಲರೂ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಖ್ಯಾತ ವಿದ್ವಾಂಸರು ಹಾಗೂ ವಿಮರ್ಶಕರಾದ ಡಾ. ಎಂ. ಪ್ರಭಾಕರ ಜೋಷಿ ‘ಸಮಾರೋಪ ನುಡಿಗಳನ್ನಾಡಲಿದ್ದು, ಸಮಾರೋಪ ಸಮಾರಂಭದ ಬಳಿಕ ಹರಿದಾಸ ಶ್ರೀ ದೇವಕೀತನಯ ಕೊಡ್ಲು ಇವರಿಂದ ‘ಸುಧನ್ವ ಮೋಕ್ಷ’ ಹರಿಕಥೆ ನಡೆಯಲಿದೆ.