ಪಿ. ಕಾಳಿಂಗ ರಾವ್ ಹೆಸರು ಕೇಳಿದ ಕೂಡಲೇ ಕನ್ನಡ ಸಾರಸ್ವತ ಲೋಕಕ್ಕೆ ನೆನಪಾಗುವುದು ಹುಯಿಲಗೋಳ ನಾರಾಯಣ ರಾಯರ ರಚನೆಯ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆ. ಕನ್ನಡದ ಈ ನಾಡ ಭಕ್ತಿಗೀತೆಗೆ 1947ರಲ್ಲಿ ರಾಗ ಸಂಯೋಜನೆ ಮಾಡಿ ಹಾಡಿದವರು ಪಿ. ಕಾಳಿಂಗ ರಾಯರು. ಇದು ಕರ್ಣಾಟಕ ಏಕೀಕರಣಕ್ಕೆ ಕಾಳಿಂಗ ರಾಯರು ನೀಡಿದ ಅಮೂಲ್ಯ ಕೊಡುಗೆ. ಕನ್ನಡ ರಾಜ್ಯೋತ್ಸವದ ನಂತರ ಈ ಹಾಡಿಗಾಗಿ ಕರ್ನಾಟಕ ಸರಕಾರ ಕಾಳಿಂಗ ರಾಯರಿಗೆ ವಿಶೇಷ ಸನ್ಮಾನ ಮಾಡಿತು.
ಪಿ. ಕಾಳಿಂಗ ರಾವ್ ಎಂದೆ ಪ್ರಸಿದ್ಧರಾದ ಪಾಂಡೇಶ್ವರ ಕಾಳಿಂಗ ರಾಯರು ಮೂಲತಃ ಉಡುಪಿ ಜಿಲ್ಲೆಯ ಬಾರ್ಕೂರಿನ ಮೂಡುಕೆರೆಯವರು. ಇವರು ಯಕ್ಷಗಾನದಲ್ಲಿ ಪ್ರಸಿದ್ಧರಾದ ನಾರಾಯಣ ರಾಯರ ಸುಪುತ್ರ. ನಾರಾಯಣ ರಾಯರನ್ನು ‘ಪಾಂಡೇಶ್ವರ ಪುಟ್ಟಯ್ಯ’ ಎಂದೇ ಕರೆಯುತ್ತಿದ್ದರು. ಭಾರತೀಯ ಭಾವಗೀತೆ ಮತ್ತು ಸುಗಮ ಸಂಗೀತ ಗಾಯಕ ಪಿ. ಕಾಳಿಂಗ ರಾವ್ ಜನಿಸಿದ್ದು 31 ಆಗಸ್ಟ್ 1914ರಲ್ಲಿ. ಕಾಳಿಂಗ ರಾಯರಿಗೆ ಸಾಹಿತ್ಯದ ರುಚಿ ಹತ್ತಿಸಿದವರು ಅವರ ಸೋದರ ಮಾವ. 5ನೇ ತರಗತಿಯಲ್ಲಿ ಓದುತ್ತಿರುವಾಗಲೇ ಮುಂಡಾಜೆ ರಂಗನಾಥ ‘ಅಂಬಾ ಪ್ರಸಾದಿತ ನಾಟಕ ಮಂಡಳಿ’ಗೆ ಸೇರಿಕೊಂಡರು. ಇವರು ಸಂಗೀತ ನೀಡಿದ ಮೊದಲ ಚಲನಚಿತ್ರ ಹಿಂದಿಯ ‘ಪ್ರೇಮ್ ಸಾಗರ್’. 1955ರ ವೇಳೆಯಲ್ಲಿ ಗುಬ್ಬಿ ವೀರಣ್ಣನವರು ‘ದಶಾವತಾರ’ ಎಂಬ ಮಹಾನಾಟಕವನ್ನು ರಂಗಕ್ಕೆ ತಂದರು. ಅದರ ಸಂಗೀತ ನಿರ್ದೇಶನಕ್ಕೆ ಕಾಳಿಂಗ ರಾಯರ ನಿಯೋಜನೆಯಾದುದು ವಿಶೇಷ. ರಂಗನಾಟಕಗಳಿಗೂ ವಿನೂತನ ಶೈಲಿಯ ನವನವೀನ ರಾಗರೂಪವನ್ನು ಕೊಟ್ಟು ಪಿ. ಕಾಳಿಂಗ ರಾಯರು ಪ್ರಸಿದ್ಧರಾದರು.
ಗುಬ್ಬಿ ಕಂಪೆನಿಯಲ್ಲಿ ಐದಾರು ವರ್ಷಗಳ ಕಾಲ ಶ್ರದ್ಧೆಯಿಂದ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ ಖ್ಯಾತಿ ಇವರದು. ‘ತುಂಬಿದ ಕೊಡ’ ಚಿತ್ರದಲ್ಲಿ ‘ಅಂತಿಂಥ ಹೆಣ್ಣು ನೀನಲ್ಲ’ ಎಂಬ ಹಾಡನ್ನು ಹಾಡುವ ದೃಶ್ಯದ ಮೂಲಕ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ‘ವಸಂತ ಸೇನಾ’ ಚಲನಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಮತ್ತು ಅದೇ ಚಿತ್ರದಲ್ಲಿ ಜೈನ ಸನ್ಯಾಸಿಯ ಪಾತ್ರವನ್ನೂ ನಿರ್ವಹಿಸಿದ್ದಾರೆ. ‘ನವ್ಯ ಜ್ಯೋತಿ ಸ್ಟುಡಿಯೋ’ದ ಮುಖ್ಯಸ್ಥರಾಗಿ ಜೆ.ಆರ್. ರಾಮಯ್ಯ ಇರುವಾಗ ಅವರು ಕೇಳಿಕೊಂಡ ಮೇರೆಗೆ ಅಲ್ಲಿ ತಯಾರಾಗುವ ಎಲ್ಲಾ ಚಿತ್ರಗಳಿಗೂ ಸಂಗೀತ ನೀಡಲು ಒಪ್ಪಿದ್ದರು. ಭಿಕ್ಷೆ ಬೇಡುತ್ತಿದ್ದ ಹುಡುಗಿ ಒಬ್ಬಳ ಕಂಠಸಿರಿಗೆ ಆಕರ್ಷಿತರಾದ ಕಾಳಿಂಗ ರಾಯರು ಆಕೆಯಿಂದ ‘ಭಕ್ತ ರಾಮದಾಸ’ ಚಿತ್ರಕ್ಕೆ ಹಾಡೊಂದು ಹಾಡಿಸಿದ್ದರು. ಆ ನಂತರ ಕನ್ನಡ ಕಾವ್ಯವನ್ನು ಜನರಿಗೆ ತಲುಪಿಸುವ ಮಹತ್ತರವಾದ ಜವಾಬ್ದಾರಿಯನ್ನು ಅ.ನ. ಕೃಷ್ಣ ರಾಯರ ಸಲಹೆಯಂತೆ ಕೈಗೆತ್ತಿಕೊಂಡು ಅದನ್ನು ಯಶಸ್ವಿಯಾಗಿ ಮುನ್ನಡೆಸಿದರು. ಸಾಕಷ್ಟು ಚಿತ್ರಗಳಿಗೆ ಸಂಗೀತ ನೀಡಿದ ಇವರ ಪ್ರತಿಭೆ ಅನಾವರಣಗೊಂಡದ್ದು ಸುಗಮ ಸಂಗೀತ ಕ್ಷೇತ್ರದಲ್ಲಿ.
‘ಕನ್ನಡದ ಸುಗಮ ಸಂಗೀತದ ಆದ್ಯ ಪ್ರವರ್ತಕ’ ಎಂಬ ಕೀರ್ತಿಗೆ ಪಾತ್ರರಾದ ಭಾವಗಂಧರ್ವ ಪಾಂಡೇಶ್ವರ ಕಾಳಿಂಗ ರಾಯರು 21 ಸೆಪ್ಟೆಂಬರ್ 1981ರಲ್ಲಿ ಕಲಾ ಶಾರದೆಯ ಪಾದ ಸೇರಿದರು. ಇಂದು ಅವರ ಜನ್ಮದಿನ. ಸಂಗೀತ ಕ್ಷೇತ್ರಕ್ಕೆ ನೀಡಿದ ಅನನ್ಯ ಸೇವೆಯನ್ನು ನೆನೆಯುವ ಮೂಲಕ ಅದಮ್ಯ ಚೇತನಕ್ಕೆ ಅಂತಾರಾಳದ ನಮನಗಳು.
– ಅಕ್ಷರೀ