ವಿನಾಯಕ ಗಣಪತಿ ನಾಯಕರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಕೋಡಿಯಲ್ಲಿ ದಿನಾಂಕ 01 ಸೆಪ್ಟೆಂಬರ್ 1950ರಂದು ಜನಿಸಿದರು. ತಂದೆ ಗಣಪತಿ ನಾಯಕ ಹಾಗೂ ತಾಯಿ ಸೀತಾದೇವಿ ನಾಯಕ. ತಮ್ಮ ವಿದ್ಯಾಭ್ಯಾಸವನ್ನು ಉತ್ತರ ಕನ್ನಡದಲ್ಲಿ ಪೂರೈಸಿದ ನಾಯಕರು ಬೋಧನಾ ವೃತ್ತಿಯನ್ನು ಆರಂಭಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದ ಜನತಾ ಪದವಿ ಪೂರ್ವ ವಿದ್ಯಾಲಯದಲ್ಲಿ. ವಿಮರ್ಶಕರಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ವಿ.ಗ. ನಾಯಕರು ನಿಯಮಿತವಾಗಿ ಪತ್ರಿಕೆಗಳಿಗೆ ಬರೆದ ಅಂಕಣಗಳ ಕೃತಿ ‘ಬಿಡುಗಡೆ’, ‘ವಾಲಗ’, ‘ಕವಿಯಿಂದ ಕಿವಿಗೆ’. ಇವರ ವ್ಯಾಪಕ ಅಧ್ಯಯನದ ಕೃತಿ ‘ಹರಿಕಾಂತ ಸಂಸ್ಕೃತಿ’ ಮೀನುಗಾರ ಕುಲದ ಬಗೆಗಿನ ಆಳವಾದ ಜ್ಞಾನವನ್ನು ನೀಡುತ್ತದೆ.
ತಮ್ಮ ಬಾಲ್ಯದಿಂದಲೇ ಸಾಹಿತ್ಯಾಸಕ್ತಿ ಹೊಂದಿದ್ದ ವಿ.ಗ. ನಾಯಕರು ರಚಿಸಿರುವ ಕೃತಿಗಳು ಹಲವು. ‘ಹೊನ್ನೂರ ಜಾಜಿ’, ‘ಒಳಗೂಡಿನಲ್ಲಿ’, ‘ಗೋಲಗುಮ್ಮಟ’, ‘ನೆಲಗುಮ್ಮ’ ಇವರ ಕವನ ಸಂಗ್ರಹಗಳು. ‘ಒರೆಗಲ್ಲು’, ‘ಪ್ರತಿಸ್ಪಂದನ’, ‘ಕನ್ನಡದಲ್ಲಿ ಹನಿಗವನಗಳು’, ‘ತಾರ್ಕಣೆ’ ಇವರ ವಿಮರ್ಶಾ ಗ್ರಂಥಗಳು. ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇವರು ನಿರ್ವಹಿಸಿದ ಕಾರ್ಯಗಳು ಹಲವಾರು. ಅಡ್ಯನಡ್ಕದಲ್ಲಿ ಸ್ಮೃತಿ ಪ್ರಕಾಶನ ಮತ್ತು ವೇದಿಕೆಗಳ ಸಂಚಾಲಕರಾಗಿದ್ದರು. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಗಳಲ್ಲಿ ಗೌರವ ಕಾರ್ಯದರ್ಶಿಗಳಾಗಿದ್ದರು. ಬಂಟ್ವಾಳ ತಾಲೂಕಿನ ಒಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡು ಸಮರ್ಪಕವಾಗಿ ನಿರ್ವಹಿಸಿದ ಖ್ಯಾತಿ ಇವರದು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತ ಸಮಿತಿಯ ಗೌರವ ಸದಸ್ಯರಾಗಿದ್ದರು. ‘ವರ್ಧಮಾನ ಸಾಹಿತ್ಯ ಪ್ರಶಸ್ತಿ’, ದ.ಕ. ಜಿಲ್ಲಾ ‘ರಾಜ್ಯೋತ್ಸವ ಪ್ರಶಸ್ತಿ’, ‘ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ ಹಾಗೂ ಇನ್ನೂ ಹಲವು ಗೌರವ ಸನ್ಮಾನಗಳಿಗೆ ವಿ.ಗ. ನಾಯಕರು ಭಾಜನರಾಗಿದ್ದಾರೆ. ಅಭಿಮಾನಿಗಳ ಪ್ರೀತಿಯ ಅಭಿನಂದನಾ ಗ್ರಂಥಗಳಾದ ‘ಹೊನ್ನೂರ ಜಾಜಿ’ ಹಾಗೂ ‘ನಾವಿಕ’ ಇವರಿಗೆ ಅರ್ಪಿತವಾಗಿವೆ.
– ಶ್ರೀಮತಿ ಮಾಧುರಿ ಶ್ರೀರಾಮ್
ಅಧ್ಯಾಪಕಿ, ಮಂಗಳೂರು