ಮುಂಬೈ : ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಹಾಗೂ ಅಭಿನವ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 05 ಸೆಪ್ಟೆಂಬರ್ 2025 ಶುಕ್ರವಾರದಂದು ಬೆಳಿಗ್ಗೆ 11-30 ಗಂಟೆಗೆ ಕನ್ನಡದ ಖ್ಯಾತ ವಿಮರ್ಶಕ, ಚಿಂತಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯರವರ ಕನ್ನಡ ಸಾಹಿತ್ಯ, ಪರಂಪರೆ ಮತ್ತು ವರ್ತಮಾನ ಕೃತಿ ಕುರಿತ ಸಹೃದಯ ಗೋಷ್ಠಿಯು ನಡೆಯಲಿದೆ.
ಗೂಗಲ್ ವೇದಿಕೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಡಾ. ಅನುಷ ಎಚ್.ಸಿ. ಹಾಗೂ ಡಾ. ರಾಜಶೇಖರ ಹಳೆಮನೆ ಉಜಿರೆ ಇವರು ಪಾಲ್ಗೊಳ್ಳಲಿರುವರು. ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿಗಳಾದ ಕಲಾ ಭಾಗ್ವತ್ ಮತ್ತು ನಳಿನಾ ಪ್ರಸಾದ್ ಕೃತಿಯ ಆಯ್ದ ಭಾಗಗಳ ವಾಚನ ಮಾಡಲಿರುವರು. ಸಹಾಯಕ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಸುಧಾಕರ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಲಿರುವರು. ವಿದ್ಯಾ ರಾಮಕೃಷ್ಣ ತಾಂತ್ರಿಕವಾಗಿ ಸಹಕರಿಸುವರು. http://meet. google.com/sjq-bpxm-zbt ಲಿಂಕ್ ಮೂಲಕ ಈ ಕಾರ್ಯಕ್ರಮಕ್ಕೆ ಸೇರಿಕೊಳ್ಳಬಹುದಾಗಿದೆ ಎಂದು ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ.ಎನ್. ಉಪಾಧ್ಯ ಹಾಗೂ ನ. ರವಿಕುಮಾರ ಅಭಿನವ ಬೆಂಗಳೂರು ಇವರು ತಿಳಿಸಿದ್ದಾರೆ.
ಡಾ. ನರಹಳ್ಳಿ ಇವರ ವಿನೂತನ ಕೃತಿ
ಡಾ. ನರಹಳ್ಳಿ ಬಾಲಸುಬ್ರಮಣ್ಯ ಇವರು ಕನ್ನಡದ ಮೇಲ್ಪಂಕ್ತಿಯ ವಿಮರ್ಶಕರಲ್ಲಿ ಒಬ್ಬರು. ಕನ್ನಡ ವಿಮರ್ಶೆಗೆ ಹೊಸ ಆಯಾಮವನ್ನು ಜೋಡಿಸಿದ ಹಿರಿಮೆ ಇವರಿಗೆ ಸಲ್ಲುತ್ತದೆ. ಸಾಹಿತ್ಯ ಪರಂಪರೆ ಮತ್ತು ವರ್ತಮಾನ ಇದು ಡಾ. ನರಹಳ್ಳಿಯವರ ಇತ್ತೀಚಿನ ವಿಮರ್ಶಾ ಕೃತಿ. ಅಭಿನವದ ಸಾವಿರದ ಪುಸ್ತಕವಾಗಿ ಬೆಳಕು ಕಂಡಿದೆ. ಸಾವಿರ ವರ್ಷಗಳ ಸಮೃದ್ಧ ಸಾಹಿತ್ಯ ಪರಂಪರೆಗೆ ವಾರಸುದಾರರು ನಾವು, ಪರಂಪರೆಯೊಡನೆ ಅನುಸಂಧಾನ ವರ್ತಮಾನದ ಜರೂರು ಎಂಬುದನ್ನು ಸೂಚಿಸುತ್ತಲೇ ಕನ್ನಡ ಸಾಹಿತ್ಯದ ಗುಣಾ ಅತಿಶಯಗಳನ್ನು ಇಲ್ಲಿ ನರಹಳ್ಳಿ ಬಾಲಸುಬ್ರಹ್ಮಣ್ಯರವರು ವಿಭಿನ್ನ ನೆಲೆಗಳಲ್ಲಿ ವಿಶ್ಲೇಷಣೆಗೊಳಪಡಿಸಿದ್ದಾರೆ.
‘ಹಿಂದಣ ಹೆಜ್ಜೆಯ ಕಂಡಲ್ಲದೆ ನಿಂದ ಹೆಜ್ಜೆಯನರಿಯಬಾರದು’ ಇದು ಅಲ್ಲಮನ ಮಾತು. ಪರಂಪರೆಯ ಅರಿವು ವರ್ತಮಾನದ ಅನೇಕ ಸಮಸ್ಯೆಗಳಿಗೆ ಪರಿಹಾರದ ಸಾಧ್ಯತೆಗಳನ್ನು ಸೂಚಿಸುತ್ತದೆ. ಸಂವೇದನಾಶೀಲ ಸೂಕ್ಷ್ಮಮನಸ್ಸುಗಳು ಈ ಹಿಂದೆ ಇಂಥ ಸಮಸ್ಯೆಗಳನ್ನು ಹೇಗೆ ಮುಖಾಮುಖಿಯಾಗಿದ್ದವು ಎಂಬ ಅಧ್ಯಯನ ಇಂದಿನ ಬಿಕ್ಕಟ್ಟುಗಳಿಗೆ ಬಿಡುಗಡೆಯ ಒಳನೋಟಗಳನ್ನು ಒದಗಿಸುತ್ತದೆ. ಪ್ರಭುತ್ವಕ್ಕೆ ಸೃಜನಶೀಲತೆ ಡೊಗ್ಗು ಸಲಾಮು ಹಾಕುತ್ತಿರುವ ಸಂದರ್ಭದಲ್ಲಿ ಪಂಪನ ಸೃಜನಶೀಲ ಪ್ರತಿಭೆ ಪ್ರಭುತ್ವವನ್ನು ಎದುರಿಸಿದ ಕ್ರಮ ಅತ್ಯಂತ ಪ್ರಸ್ತುತ. ಧಾರ್ಮಿಕ ಸಂಸ್ಥೆಗಳು ಸೃಷ್ಟಿಸುತ್ತಿರುವ ಹಿಂಸೆ, ಭಯೋತ್ಪಾದನೆಯ ಹೊತ್ತಿನಲ್ಲಿ ವಚನಕಾರರು ಧರ್ಮದ ಸಾಂಸ್ಥಿಕ ರೂಪವನ್ನು ವಿರೋಧಿಸಿದ ಕ್ರಮ ಅಧ್ಯಯನಯೋಗ್ಯ ಪ್ರವೃತ್ತಿ – ಸಂಸ್ಕೃತಿಗಳ ಸಂಘರ್ಷವನ್ನು ಜನ್ನ ಚಿತ್ರಿಸಿದ್ದು, ಲೌಕಿಕ ಅಲೌಕಿಕಗಳನ್ನು ರತ್ನಾಕರವರ್ಣಿ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡದ್ದು, ಕನಕದಾಸ ಪಟ್ಟಭದ್ರ ವ್ಯವಸ್ಥೆಯನ್ನು ವಿರೋಧಿಸಿದ್ದು, ಕುಮಾರವ್ಯಾಸ ಭಕ್ತಿಯ ಆವೇಶದಲ್ಲೂ ಕಲಾತ್ಮಕ ಎಚ್ಚರವನ್ನು ಕಾಯ್ದುಕೊಂಡದ್ದು – ಈ ಎಲ್ಲದರ ಸೂಕ್ಷ್ಮ ಅಧ್ಯಯನ ಸಮಕಾಲೀನ ಸಾಹಿತ್ಯ ಸಂಸ್ಕೃತಿಗೆ ಮಾತ್ರವಲ್ಲ, ನಮ್ಮ ಬದುಕಿಗೂ ಮಾರ್ಗದರ್ಶನ ನೀಡಬಲ್ಲುದು. ಎಲ್ಲಕ್ಕಿಂತ ಮುಖ್ಯವಾಗಿ ‘ಜನ ಬದುಕಬೇಕೆಂದು ಕಾವ್ಯಮುಖದಿಂ ಪೇಳ್ವೆನನಪೇಕ್ಷೆಯಿಂದ’ ರಾಘವಾಂಕನ ಪರಿಕಲ್ಪನೆಯಂತೂ ಭಾರತೀಯ ಕಾವ್ಯಮೀಮಾಂಸೆಯಲ್ಲಾಗಲೀ ಪಾಶ್ಚಾತ್ಯ ಕಾವ್ಯಮೀಮಾಂಸೆಯಲ್ಲಾಗಲೀ ಕಾಣಸಿಗದ, ಕನ್ನಡಕ್ಕೇ ವಿಶಿಷ್ಟವಾದ ಮಹತ್ವದ ಕಾವ್ಯ ಚಿಂತನೆಯಾಗಿದೆ. ಹೀಗೆ ಕನ್ನಡ ಸಾಹಿತ್ಯ ಪರಂಪರೆಯ ಅನನ್ಯತೆಯನ್ನು ಈ ಕೃತಿಯಲ್ಲಿ ಲೋಕ ಸಮ್ಮುಖಗೊಳಿಸಲಾಗಿದೆ.