ಯಕ್ಷಗಾನ ಕಲಾವಿದೆ, ನೃತ್ಯಗಾತಿ, ಶಿಕ್ಷಕಿ, ಕವಯಿತ್ರಿ, ಲೇಖಕಿ… ಹೀಗೆ ಬಹುಮುಖ ಪ್ರತಿಭೆಯ ಶ್ರೀಮತಿ ಡಿ. ಸುಕನ್ಯ ಟೀಚರ್ (65 ವ) ದಿನಾಂಕ 30 ಆಗಸ್ಟ್ 2025 ಶನಿವಾರದಂದು ನಮ್ಮನ್ನು ಅಗಲಿದ್ದಾರೆ. ಇವರು 60ರ ದಶಕದಲ್ಲಿ ನಮ್ಮ ಪರಿಸರದ ಹೆಸರುವಾಸಿ ಆಧುನಿಕ ಶೈಲಿಯ ನೃತ್ಯ ಗುರುಗಳೂ, ಯಕ್ಷಗಾನ ಕಲಾವಿದರೂ ಆಗಿದ್ದ ಗಾಣದಕೊಟ್ಯ ಕೇಶವ ‘ಮಾಸ್ಟರ್’ ಪಾಟಾಳಿ (ಮಾಸ್ಟರ್ ಕೇಶವ ಕನ್ಯಾನ) ಅವರ ಮಗಳು. ಇವರು ಪುತ್ತೂರು ತಾಲೂಕಿನ ಪೆರ್ನಾಜೆ ಪ್ರೌಢಶಾಲೆಯ ಶಿಕ್ಷಕಿಯಾಗಿ ಎರಡು ವರ್ಷಗಳ ಹಿಂದೆ ನಿವೃತ್ತರಾದವರು. ತನ್ನ ಸುತ್ತಮುತ್ತಲಿನ ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸದಾ ಪ್ರೇರೇಪಿಸಿ ತಂದೆಯವರ ಕಲಾ ಸೇವೆಯನ್ನು ಮುಂದುವರಿಸುತ್ತಿದ್ದರು. ಒಳ್ಳೆಯ ನೃತ್ಯಗಾತಿಯೂ ಆದ ಅವರು, 70 – 80ರ ದಶಕಗಳಲ್ಲಿ ಹಲವಾರು ಕಡೆ ಯಕ್ಷಗಾನಗಳಲ್ಲೂ ಪಾತ್ರವಹಿಸಿ ಮಿಂಚಿದ್ದರು. ಚಂದದ ಹೆಜ್ಜೆಗಾರಿಕೆ ಅವರದು.
ದೇಲಂತಬೆಟ್ಟಿನ ಶ್ರೀವಿಷ್ಣುಮೂರ್ತಿ ದೇವಸ್ಥಾನದ ಮಾತೃಮಂಡಳಿಯ ಸಕ್ರಿಯ ಕಾರ್ಯಕರ್ತೆಯಾಗಿದ್ದು ಇತ್ತೀಚಿಗೆ ಆರಂಭಗೊಂಡ ನೃತ್ಯಭಜನಾ ಮಂಡಳಿಯ ಉಗಮಕ್ಕೆ ಸಂಪೂರ್ಣ ಸಹಕಾರವನ್ನು ನೀಡಿದವರು. ದಶಕಗಳ ಕಾಲ ನಡೆದ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮ ಕಲಶಾದಿ ಕಾರ್ಯಕ್ರಮಗಳಲ್ಲಿ ತನು ಮನ ಧನ ಗಳಿಂದ ತೊಡಗಿಸಿಕೊಂಡವರು. ಶ್ರೀಮತಿ ಡಿ. ಸುಕನ್ಯಾರು ನೃತ್ಯ – ಸಾಂಸ್ಕೃತಿಕ ಕ್ಷೇತ್ರದಲ್ಲಿ ಎಷ್ಟು ಕ್ರಿಯಾಶೀಲರಾಗಿದ್ದರೋ, ಸಾಹಿತ್ಯ – ಶೈಕ್ಷಣಿಕ ಕ್ಷೇತ್ರದಲ್ಲೂ ಅಷ್ಟೇ ತೊಡಗಿಸಿಕೊಂಡಿದ್ದರು. ಹಲವಾರು ಕಾವ್ಯ – ಸಾಹಿತ್ಯ ಗೋಷ್ಠಿಗಳಲ್ಲಿ ಭಾಗವಹಿಸಿದ್ದರು. ಒಳ್ಳೆಯ ಕವಯತ್ರಿಯಾದ ಅವರ ಒಂದೆರಡು ಕವನ ಸಂಕಲನಗಳು ಪ್ರಕಟವಾಗಿವೆ. ಹಲವು ಪತ್ರಿಕೆಗಳಲ್ಲಿ ಅವರ ಕವನ, ಲೇಖನಗಳು ಪ್ರಕಟಗೊಂಡಿವೆ.
ಅವರ ತಂದೆಯವರಾದ ಮಾಸ್ಟರ್ ಕೇಶವ (ಕೇಚು ಮಾಸ್ಟರ್) ಕನ್ಯಾನರು ರಚಿಸಿದ ಹಲವು ನೃತ್ಯ ರೂಪಕಗಳು ತುಂಬಾ ಪ್ರಸಿದ್ಧಿಗೊಂಡಿವೆ. ಅವುಗಳಲ್ಲಿ ಕೊರವಂಜಿ ನೃತ್ಯ, ಬೇಡರ ನೃತ್ಯ, ಕಾಳಿಂಗ ಮರ್ದನ, ಪೂಜಾ ನೃತ್ಯ, ನವಿಲು ನೃತ್ಯ, ಶಿವ ತಾಂಡವ… ಮುಂತಾದವುಗಳು ಮನೆಮಾತಾಗಿದ್ದವು. ಸುಕನ್ಯರೂ ಸಹಾ ಕೆಲವು ಮಕ್ಕಳ ರೂಪಕ ಹಾಗೂ ಕಿರು ನಾಟಕಗಳನ್ನೂ ರಚಿಸಿದ್ದರು. ಇವುಗಳನ್ನೆಲ್ಲಾ ಸೇರಿಸಿ, ಒಂದು ನೃತ್ಯ ರೂಪಕಗಳ ಸಂಕಲನವನ್ನು ಹೊರ ತಂದರೆ, ಮುಂದಿನ ಪೀಳಿಗೆಗೆ ಒಳ್ಳೆಯ ಕೊಡುಗೆ ಆದೀತು. ಸದಾ ಉತ್ಸಾಹದ ಚಿಲುಮೆಯಾಗಿದ್ದ ಸುಕನ್ಯರು ಅಲ್ಪಕಾಲದ ಅಸೌಖ್ಯದಿಂದ ಒಬ್ಬಳು ಮಗಳು, ಇಬ್ಬರು ಸಹೋದರರು, ಅಪಾರ ಶಿಷ್ಯವರ್ಗವನ್ನು ಹಾಗೂ ನಮ್ಮನ್ನು ಅಗಲಿದ್ದು, ಅವರ ಆತ್ಮಕ್ಕೆ ವಿಷ್ಣುಸಾಯುಜ್ಯದ ಚಿರಶಾಂತಿ ಪ್ರಾಪ್ತಿಯಾಗಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆ.
ರಾಜಗೋಪಾಲ್ ಕನ್ಯಾನ