ವಿರಾಜಪೇಟೆ : ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ಮತ್ತು ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ ವಿರಾಜಪೇಟೆ ಇವರ ಸಹಯೋಗದಲ್ಲಿ ಗಣೇಶೋತ್ಸವ ಕವಿಗೋಷ್ಠಿ, ಕೃತಿ ಲೋಕಾರ್ಪಣೆ ಹಾಗೂ ಗೀತಗಾಯನ ಕಾರ್ಯಕ್ರಮ ದಿನಾಂಕ 31 ಆಗಸ್ಟ್ 2025ರಂದು ವಿರಾಜಪೇಟೆಯ ಮೂರ್ನಾಡು ರಸ್ತೆಯ ಶ್ರೀ ಕಾವೇರಿ ಗಣೇಶೋತ್ಸವ ಸಮಿತಿಯ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಡಿನ ಹಿರಿಯ ಕವಿ ಡಾ. ಜಯಪ್ಪ ಹೊನ್ನಾಳಿ “ಕವಿಗಳಿಗೆ ಆಕಾಶದಲ್ಲಾಡುವ ಒಂಟಿ ಹಕ್ಕಿಯ ನಿಟ್ಟುಸಿರನ್ನು ಕೇಳಿಸಿಕೊಳ್ಳುವ, ಸಾಗರದಾಳದ ಒಂಟಿ ಮೀನಿನ ಕಣ್ಣೀರನ್ನು ಕಾಣುವ ಸೂಕ್ಷ್ಮತೆ ಇರಬೇಕು, ಕವಿಗೆ ವ್ಯವಹಾರಿಕವಾದ ಬದುಕನ್ನು ನೋಡುವ ಹೊರಗಣ್ಣುಗಳಿಗಿಂತ, ಬಾಳಿನೊಳಗಿನೊಳಗನ್ನು ಕಾಣುವ ವಿಸ್ಮಯದಿಂದ ತೆರೆದ ಒಳಗಣ್ಣು ಬಹುಮುಖ್ಯ, ಅಂತರಂಗದ ಅಚ್ಚರಿಯ ಕಣ್ಣು ತೆರೆದಾಗ ಮಾತ್ರ ಅವನಿಗೆ ಜೀವನದ ಸಮಗ್ರ ದರ್ಶನ ಸಾಧ್ಯವಾಗುತ್ತದೆ, ಕವಿತೆಯೆಂದರೆ ಅದೊಂದು ಕವಿಯ ಧ್ಯಾನಸ್ಥ ಮನೋಸ್ಥಿತಿಯಲ್ಲಿ ಅರಳುವ ಮಂದಾರ ಪುಷ್ಪ, ಅದರಲ್ಲಿ ಅರ್ಥದ ಮಕರಂದ, ಚೆಲುವಿನ ಪ್ರಾಸದ ದಳದಳಗಳ ಚೆಲುವು, ಪರಿಮಳಪೂರ್ಣವಾದ ಸೆಳೆತದ ಜೀವಭಾವದೊಲವಿನ ನಿಲುವುಗಳು ಸಂಗಮಿಸಿರಬೇಕು, ಹಾಗಾದಾಗ ಮಾತ್ರ ಅದು ರಸಪೂರ್ಣವಾಗಿ ಸಮಷ್ಟಿಗೆ ಪುಷ್ಟಿ ನೀಡುವ ಸತ್ಫಲವಾಗಿ ಒದಗುವುದು, ಕವಿಗಳು ತಪಸ್ಸೆಂಬಂತೆ ಕಾವ್ಯಕೃಷಿಯನ್ನು ಸಮರ್ಪಣೆಯಿಂದ ಮಾಡಿದಾಗ ಮಾತ್ರ, ಶ್ರೇಷ್ಠ ಕವಿತೆ ರಚಿಸಲು ಸಾಧ್ಯ, ಸಾವಿರದ ಕವಿತೆಯ ಮೂಲಕ ಕಾಲಾತೀತರಾಗಲೂ ಸಾಧ್ಯ, ಕವಿ ತಾನು ಶಾಶ್ವತ ಸಾಂಸ್ಕೃತಿಕ ಶಾಸಕ ಎಂಬುದನ್ನೆಂದೂ ಮರೆಯಬಾರದು” ಎಂದರು.
ನಿಕಟಪೂರ್ವ ಕ.ಸಾ.ಪ. ಅಧ್ಯಕ್ಷರಾದ ಲೋಕೇಶ್ ಸಾಗರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ಸಂಸ್ಥಾಪಕ ವೈಲೇಶ್ ಪಿ.ಎಸ್. ಕೊಡಗು ಪ್ರಾಸ್ತಾವಿಕ ನುಡಿಗಳನ್ನಾಡಿದರು, ಹಿರಿಯ ಕವಿ ಗಿರೀಶ್ ಕಿಗ್ಗಾಲುರವರು ವಿರಾಜಪೇಟೆಯ ಉಪ ಖಜಾನೆ ಅಧೀಕ್ಷಕರಾದ ಗಣೇಶ್ ನಿಲವಾಗಿಲು ಅವರು ರಚಿಸಿರುವ ‘ಹುಣಸೂರಿನ ಅರಸು’ ಕೃತಿಯನ್ನು ಲೋಕಾರ್ಪಣೆ ಮಾಡಿದರು. ಬೆಂಗಳೂರಿನ ಕವಿ ಹಾ.ಮ. ಸತೀಶ್, ಭೀಮರಾವ್ ವಾಷ್ಠರ್ ಹಾಗೂ ನಂಬುಡುಮಾಡ ರಾಜಪ್ಪನವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ನಾಡು ನುಡಿಯ ಸೇವೆ ಸಲ್ಲಿಸಿದ ಗಿರೀಶ್ ಕಿಗ್ಗಾಲು, ಮೊಣ್ಣಂಡ ಶೋಭಾ ಸುಬ್ಬಯ್ಯ, ಭಾಗ್ಯವತಿ ಅಣ್ಣಪ್ಪ ಟಿ.ವಿ., ಪುಷ್ಪ ಡಿ. ಹೆಚ್ ಹಾಗೂ ವತ್ಸಲಾ ಶ್ರೀಶ ಇವರಿಗೆ ‘ಸಾಹಿತ್ಯ ಸಂವರ್ಧಕ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಗಣೇಶ್‌ರವರು ಸ್ವಾಗತಿಸಿದರೆ ನಿವೃತ್ತ ಶಿಕ್ಷಕರಾದ ಮಂಜುನಾಥ್ ಎ.ವಿ. ನಿರೂಪಣೆ ಮಾಡಿದರು. ವಿಮಲ ದಶರಥ ನಿರ್ವಹಣೆ ಮಾಡಿದರು. ಭಾಗ್ಯವತಿ ಟಿ.ವಿ. ವಂದಿಸಿದರು.