ಪುತ್ತೂರು : ಗ್ರಾಮೀಣ ಭಾಗದ ಮಕ್ಕಳಿಗೆ ಹಿಮ್ಮೇಳ ಸಹಿತ ಶುದ್ಧ ಶಾಸ್ತ್ರೀಯ ಶೈಲಿಯ ಭರತನಾಟ್ಯದ ಸೊಗಡನ್ನು ಪರಿಚಯಿಸುವ ಉದ್ದೇಶದಿಂದ ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು, ವಸುಧಾರಾ ಕಲಾಕೇಂದ್ರ ಬೋಳಂತೂರು – ಮಂಚಿ ಇವರ ಸಹಯೋಗದಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಲಾವಿದರಿಂದ ‘ಮೂಕಾಂಬಿಕಾ ಮೂವತ್ತರ ಮಾರ್ದನಿ’ ಎನ್ನುವ ಮೂವತ್ತರ ವರ್ಷಾಚರಣೆಯ ಸಂದರ್ಭದಲ್ಲಿ ಗುರುಗಳಾದ ದೀಪಕ್ ಕುಮಾರ್ ಇವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ರೂಪುಗೊಂಡು ಜನಮೆಚ್ಚುಗೆ ಗಳಿಸಿದ ಸರಸ್ವತಿ-ಲಕ್ಷ್ಮಿ-ಪಾರ್ವತಿ ದೇವಿಯರ ಕಥಾ ಪ್ರಸ್ತುತಿ ‘ತ್ರಿಶಕ್ತಿ’ ದಿನಾಂಕ 31 ಆಗಸ್ಟ್ 2025ರ ಭಾನುವಾರ ಸಂಜೆ 5-00 ಗಂಟೆಗೆ ಲಯನ್ಸ್ ಕ್ಲಬ್ ಮಂಚಿ ಇಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಅಭ್ಯಾಗತರಾಗಿ ದೀಪ ಪ್ರಜ್ವಲನೆಗೈದ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀ ಉಮಾನಾಥ ರೈ ಮೇರಾವು ಇವರು ನೃತ್ಯವನ್ನು ಶ್ಲಾಘಿಸಿದರು ಹಾಗೂ ಇನ್ನಷ್ಟು ಇಂತಹ ಗುಣಮಟ್ಟದ ಕಾರ್ಯಕ್ರಮ ಆಗುವಲ್ಲಿ ತಮ್ಮ ಸಹಕಾರ ಇರುತ್ತದೆ ಎನ್ನುವ ಭರವಸೆ ನೀಡಿದರು. ಲಯನ್ಸ್ ಭವನವನ್ನು ನೃತ್ಯ ಕಾರ್ಯಕ್ರಮಕ್ಕೆ ಉಚಿತವಾಗಿ ನೀಡಿದ ಮಾಲಕರಾದ ಲ. ಡಾ. ಗೋಪಾಲ ಆಚಾರ್ ಹಾಗೂ ಶ್ರೀಮತಿ ರಮಾ ಜಿ. ಆಚಾರ್ ಅವರು ಉಪಸ್ಥಿತರಿದ್ದು ತಮ್ಮ ಅನಿಸಿಕೆಯನ್ನು ಗುರುಗಳೊಂದಿಗೆ ಹಂಚಿಕೊಂಡರು ಹಾಗೂ ಕಲಾವಿದರ ಪ್ರಯತ್ನವನ್ನು ಪ್ರಶಂಸಿಸಿದರು.
ಹಿಮ್ಮೇಳದಲ್ಲಿ ಹಾಡುಗಾರಿಕೆ ವಿದುಷಿ ಪ್ರೀತಿಕಲಾ ಪುತ್ತೂರು, ನಟುವಾಂಗ ವಿದ್ವಾನ್ ದೀಪಕ್ ಕುಮಾರ್ ಪುತ್ತೂರು, ಮೃದಂಗ ವಿದ್ವಾನ್ ವಿ. ಮನೋಹರ್ ಮಂಗಳೂರು, ಪಿಟೀಲಿನಲ್ಲಿ ಕುಮಾರಿ ತನ್ಮಯಿ ಉಪ್ಪಂಗಳ ಇವರುಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿ ಕಲಾರಸಿಕರ ಮನ ಸೆಳೆದರು. ಕಾರ್ಯಕ್ರಮದ ನೆನಪು ಸದಾ ಹಸಿರಾಗಿರಲಿ ಎನ್ನುವ ಭಾವನೆಯೊಂದಿಗೆ ಕಲಾಕೇಂದ್ರದ ಮಕ್ಕಳೇ ಬೆಳೆಸಿದಂತಹ ಗಿಡಗಳನ್ನು ಸ್ಮರಣಿಕೆಯಾಗಿ ನೀಡಲಾಯಿತು. ಆಗಮಿಸಿದ ಕಲಾಭಿಮಾನಿಗಳು ಕಲಾವಿದರ ಜೊತೆಗೆ ತಮ್ಮ ಅನುಭವವನ್ನು ಹಂಚಿಕೊಳ್ಳುವುದರ ಮೂಲಕ ಕಲಾವಿದರ ಪ್ರಯತ್ನವನ್ನು ಅಭಿನಂದಿಸಿದರು. ಓಂಕಾರ, ಶಂಖನಾದದೊಂದಿಗೆ ಆರಂಭಗೊಂಡು, ನಿತ್ಯ ಪಂಚಾಂಗ ವಾಚನ, ಸುಭಾಷಿತ ವಾಚನ ಮೂಲಕ ಮುಂದುವರೆಯಿತು. ಪ್ರಣಾದಯೋಗ ಸಂಗೀತ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥಿಸಿ, ಕುಮಾರಿ ಸಂಗೀತಾ ಸ್ವಾಗತಿಸಿ, ಕುಮಾರಿ ಶ್ರೀತಲ್ ಅಭ್ಯಾಗತರನ್ನು ಪರಿಚಯಿಸಿದರು. ಕಲಾಕೇಂದ್ರದ ಶಿಕ್ಷಕರಾದ ವಿದುಷಿ ವಸುಧಾ ಜಿ.ಎನ್. ವಂದಿಸಿ, ಕುಮಾರಿ ವೈಷ್ಣವಿ ಕಾಮತ್ ಕಾರ್ಯಕ್ರಮ ನಿರೂಪಿಸಿದರು.