ಡೊಂಬಿವಲಿ : ಕಲೆ, ಶಿಕ್ಷಣ, ಅನಿಮೇಷನ್ ಹಾಗೂ ಸಮಾಜಮುಖಿ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಮೂಡಿಸಿರುವ ಕಲಾವಿದ, ಅನಿಮೇಟರ್, ಗುರು ಹಾಗೂ ಅನಿಮೇಷನ್ ಚಿತ್ರ ನಿರ್ದೇಶಕ ಜಯ ಸಾಲಿಯನ್ ಇವರನ್ನು ಡೊಂಬಿವಲಿ ತುಳುವ ಮಹಾಸಭಾ ಘಟಕದ ಸಂಚಾಲಕರಾಗಿ ನೇಮಕ ಮಾಡಲಾಗಿದೆ.
ಮುಂಬೈ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಮಾಡುತ್ತಿರುವ ಜಯ ಸಾಲಿಯನ್ ಇವರು ಎಂ.ಎಸ್.ಸಿ. (ಅನಿಮೇಷನ್ ಮತ್ತು ವಿಎಫ್‌ಎಕ್ಸ್ – ಗುಜರಾತ್ ವಿಶ್ವವಿದ್ಯಾಲಯ), ಬಿ.ವಿ.ಎ. (ದೃಶ್ಯಕಲೆ – ಕನ್ನಡ ವಿಶ್ವವಿದ್ಯಾಲಯ ಹಂಪಿ), ಎಂ.ಎ. (ಕನ್ನಡ – ಮುಂಬೈ ವಿಶ್ವವಿದ್ಯಾಲಯ), ಎಂ.ಎಫ್.ಎ. (ಫೈನ್ ಆರ್ಟ್ಸ್ – ಶ್ರೀ ಅಲ್ಲಮಪ್ರಭು ಲಲಿತಕಲಾ ಅಕಾಡೆಮಿ ಮೈಸೂರು), ಡಿಪ್ಲೊಮಾ ಇನ್ ಆರ್ಟ್ ಎಜುಕೇಷನ್ (ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್ ಮುಂಬೈ), ಬಿ.ಎಫ್.ಎ./ಜಿ.ಡಿ. ಆರ್ಟ್ (ಥಾಣೆ ಸ್ಕೂಲ್ ಆಫ್ ಆರ್ಟ್), ಎಟಿಡಿ (ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್ ಮುಂಬೈ) ಸೇರಿದಂತೆ ಅನೇಕ ಪದವಿಗಳನ್ನು ಪಡೆದಿದ್ದಾರೆ.
ಪ್ರಸ್ತುತ ಎ.ಎಂ. ನಾಯಕ್ ಸ್ಕೂಲ್ ಕಲಾವಿಭಾಗದ ಮುಖ್ಯಸ್ಥರಾಗಿರುವ ಇವರು, ಹಿಂದೆ ಐ.ಟಿ.ಎಂ. ಯೂನಿವರ್ಸಿಟಿಯಲ್ಲಿ ವಿಭಾಗ ಮುಖ್ಯಸ್ಥರಾಗಿ, ವಿಶ್ವನಿಕೇತನ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್‌ನಲ್ಲಿ ಅತಿಥಿ ಉಪನ್ಯಾಸಕರಾಗಿ, ಪವಾರ್ ಪಬ್ಲಿಕ್ ಸ್ಕೂಲ್ (ಚಾಂದಿವಲಿ)ಯಲ್ಲಿ ವಿಭಾಗ ಮುಖ್ಯಸ್ಥರಾಗಿ, ಅಶಾಪ್ರಭ ಚಿತ್ತರಕಲಾ ಮಹಾವಿದ್ಯಾಲಯ (ಕಳ್ಯಾಣ)ದಲ್ಲಿ ಪ್ರಾಧ್ಯಾಪಕರಾಗಿ, ಬಿರ್ಲಾ ಶಾಲೆ (ಕಳ್ಯಾಣ)ದಲ್ಲಿ ಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ಯು.ಟಿ.ವಿ. ಟೂನ್ಸ್ (ಮುಂಬೈ)ನಲ್ಲಿ ಅನಿಮೇಟರ್ ಆಗಿ, ಸಂಜೆ ಸುದ್ದಿ ಹಾಗೂ ಮಹಾನಗರಿ ವರ್ತಾಹಾರ (ಮರಾಠಿ ಪತ್ರಿಕೆ)ಗಳಲ್ಲಿ ಚಿತ್ರಕಾರ ಹಾಗೂ ಲೇಔಟ್ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ.
ತಮ್ಮ ಕಲಾ-ಶೈಕ್ಷಣಿಕ ಸಾಧನೆಗಾಗಿ ಮಾಸ್ಟರ್ ಅವಾರ್ಡ್, ಪದ್ಮಶ್ರೀ ವಾಸುದೇವ ಗೈತೊಂಡೆ ಪ್ರಶಸ್ತಿ, ಆದರ್ಶ ಕಲಾ-ಶಿಕ್ಷಕ ಪ್ರಶಸ್ತಿ (ಮಹಾರಾಷ್ಟ್ರ ರಾಜ್ಯ ಕಲಾ ಅಧ್ಯಾಪಕ ಸಂಘ ಮುಂಬೈ), ಗುರು ದ್ರೋಣಾಚಾರ್ಯ ಪ್ರಶಸ್ತಿ, ಅಂತರರಾಷ್ಟ್ರೀಯ ಆನ್‌ಲೈನ್ ಪೋರ್ಟ್ರೆಟ್ ಸ್ಪರ್ಧೆಯ ಮೆರಿಟ್ ಪ್ರಶಸ್ತಿ, ಮಣಿಕರ್ಣಿಕಾ ಕಲಾಭೂಷಣ ಪ್ರಶಸ್ತಿ, ಐಡಿಟಿ ಡಿಸೈನ್ ಇನ್‌ಸ್ಟಿಟ್ಯೂಷನ್ ರಾಜ್ಯಮಟ್ಟದ ಪ್ರಶಸ್ತಿ, ಗ್ಲೋಬಲ್ ಗೋಲ್ಡ್ ಟ್ಯಾಲೆಂಟ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ, ಗುರು ಗೌರವ ಮುಂತಾದ ಅನೇಕ ಗೌರವಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅವರು ತಮ್ಮ ಕೃತಿಗಳನ್ನು ದುಬೈ ಆರ್ಟ್ ಸೆಂಟರ್ (ದುಬೈ), ಛತ್ರಪತಿ ಶಿವಾಜಿ ಮಹಾರಾಜ ಪಾರ್ಕ್ ಆರ್ಟ್ ಫೆಸ್ಟಿವಲ್ (ದಾದರ್), ಅಫೋರ್ಡಬಲ್ ಆರ್ಟ್ ಫೇರ್ (ನೆಹರು ಸೆಂಟರ್, ಮುಂಬೈ), ಲಲಿತ್ ಕಲಾ ಭವನ (ದೆಹಲಿ), ವರಾಣಾಸಿ, ಭೋಪಾಲ್, ಬರೋಡಾ, ಅಹಮದಾಬಾದ್, ನಾಗಪುರ, ಗುವಾಹಾಟಿ, ವಿಜಯಪುರ ಸೇರಿದಂತೆ ಅನೇಕ ರಾಷ್ಟ್ರಮಟ್ಟದ ಕಲಾ ಪ್ರದರ್ಶನಗಳಲ್ಲಿ ಪ್ರದರ್ಶಿಸಿದ್ದಾರೆ. ಜೊತೆಗೆ ಮೈಸೂರು ಅಸೋಸಿಯೇಷನ್ (ಮುಂಬೈ), ಪಿ.ಎಲ್. ದೇಶಪಾಂಡೆ ಆರ್ಟ್ ಗ್ಯಾಲರಿ (ಮುಂಬೈ), ಲಲಿತ್ ಕಲಾ ಅಕಾಡೆಮಿ (ದೆಹಲಿ), ಬೀದರ ಚಿತ್ರಸಂತೆ ಮುಂತಾದ ಪ್ರಮುಖ ಕಲಾ ವೇದಿಕೆಗಳಲ್ಲಿಯೂ ಭಾಗವಹಿಸಿದ್ದಾರೆ.
ಇದೇ ಜತೆಗೆ, ಜಯ ಸಾಲಿಯನ್ ಅವರು ಅನೇಕ ಕನ್ನಡ ಹಾಗೂ ಮರಾಠಿ ಪತ್ರಿಕೆಗಳಿಗೆ ಚಿತ್ರಣ ಮತ್ತು ವಿನ್ಯಾಸ ಒದಗಿಸಿದ್ದು, ‘ಅಕ್ಷಯ’, ‘ವಿವೇಕ ವೀಣೆ’, ‘ವಿವೇಕ ಸಂಪದ’, ‘ಮಹಾಮನೆ’ ಸೇರಿದಂತೆ ಹಲವಾರು ಕನ್ನಡ ಸಾಹಿತ್ಯಕೃತಿಗಳಿಗೆ ಮುಖಪುಟ ವಿನ್ಯಾಸ ಮಾಡಿದ್ದಾರೆ. ಡೊಂಬಿವಲಿಯ ತುಳುವ ಸಮುದಾಯದ ಕಲ್ಯಾಣ ಹಾಗೂ ತುಳು ಭಾಷೆ ಮತ್ತು ಸಂಸ್ಕೃತಿಯ ಪ್ರಚಾರ-ಪ್ರಸಾರದ ಹಿತಾಸಕ್ತಿಯಿಂದ ಜಯ ಸಾಲಿಯನ್ ಇವರನ್ನು ಡೊಂಬಿವಲಿ ತುಳುವ ಮಹಾಸಭಾ ಘಟಕದ ಸಂಚಾಲಕರಾಗಿ ನೇಮಕ ಮಾಡಲಾಗಿದೆ.
ಈ ನೇಮಕಕ್ಕೆ ತುಳುವರ್ಲ್ಡ್ ಫೌಂಡೇಶನ್ ಗೌರವಾಧ್ಯಕ್ಷ ಶ್ರೀ ಶ್ರೀಹರಿನಾರಾಯಣ ದಾಸ ಅಸ್ರಣ್ಣ, ಅಧ್ಯಕ್ಷ ಶ್ರೀ ಸರ್ವೋತ್ತಮ ಶೆಟ್ಟಿ (ಅಬುಧಾಬಿ) ಹಾಗೂ ಮುಂಬೈ ಸಂಚಾಲಕರಾದ ಅಡ್ವೊ. ರತ್ನಾಕರ ಶೆಟ್ಟಿ ಮೊರ್ಲಾ ಅಭಿನಂದನೆ ಸಲ್ಲಿಸಿದ್ದಾರೆ. ಜಯ ಸಾಲಿಯನ್ ಅವರ ನೇತೃತ್ವದಲ್ಲಿ ಡೊಂಬಿವಲಿಯ ತುಳುವ ಸಮುದಾಯದ ಚಟುವಟಿಕೆಗಳು ಇನ್ನಷ್ಟು ಬಲ ಪಡೆಯಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.