ತೆಕ್ಕಟ್ಟೆ : ತೆಕ್ಕಟ್ಟೆ ಮಹಾಲಿಂಗೇಶ್ವರ ದೇಗುಲದಲ್ಲಿ ದಿನಾಂಕ 06 ಸೆಪ್ಟೆಂಬರ್ 2025ರಂದು ಯಶಸ್ವೀ ಕಲಾವೃಂದದ ಸಹಕಾರದಲ್ಲಿ ದೇಗುಲದ ಸೋಣೆ ಆರತಿ ಕಾರ್ಯಕ್ರಮದಲ್ಲಿ ರಸರಂಗ (ರಿ.) ಕೋಟ ಪ್ರಸ್ತುತಿಯ ‘ಗಾಂಧಾರಿ’ ಯಕ್ಷಗಾನ ಪ್ರದರ್ಶನಕ್ಕೂ ಪೂರ್ವದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಉಡುಪಿಯವರ ಸಾಕ್ಷರತಾ ಸಪ್ತಾಹದಲ್ಲಿ ‘ಸಾಕ್ಷರ ಕಿರಣ’ ಯಕ್ಷಗಾನ ಪ್ರದರ್ಶನಗೊಂಡಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಇಲಾಖೆಯ ಉಮೇಶ್ “ಜಿಲ್ಲೆಯಲ್ಲಿ ಅನಕ್ಷರಸ್ಥರ ಸಂಖ್ಯೆ ವಿರಳವಾಗಿದ್ದು, ಎಲ್ಲರೂ ಸಾಕ್ಷರರಾಗಬೇಕೆಂಬ ಗುರಿಯೊಂದಿಗೆ ಇಲಾಖೆಯು ಕಾರ್ಯಕ್ರಮ ಅನುಷ್ಠಾನ ಮಾಡುತ್ತಿದ್ದು ಉಡುಪಿ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿಸುವ ಪ್ರಯತ್ನದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ಉಡುಪಿ ಸದಾ ಕ್ರಿಯಾಶೀಲವಾಗಿದ್ದು ಈ ನಿಟ್ಟಿನಲ್ಲಿ ರಸರಂಗ (ರಿ.) ಕೋಟ, ಯಶಸ್ವೀ ಕಲಾವೃಂದ ಪ್ರತೀ ವರ್ಷವೂ ಸಹಕಾರಿಯಾಗಿ ಬೆಂಬಲಿಸುತ್ತಿರುವುದು ಶ್ಲಾಘ್ಯಾಯೋಗ್ಯ ವಿಚಾರ” ಎಂದು ಹೇಳಿದರು.
“ಯಕ್ಷಗಾನದಲ್ಲಿ ಅನೇಕ ನೂರಾರು ಪ್ರಸಂಗಗಳು ರಂಗದಲ್ಲಿ ಪ್ರದರ್ಶನಕ್ಕಾಗಿ ವಿರಳವಾಗಿದೆ. ಅದರಲ್ಲಿನ ‘ಗಾಂಧಾರಿ’ ಆಖ್ಯಾನವೂ ಒಂದು. ಇಂತಹ ಪ್ರಸಂಗಗಳನ್ನು ಆಗಾಗ ರಂಗದಲ್ಲಿ ಪ್ರದರ್ಶಿಸಿ ಪರಿಚಯಿಸುವ ಕಾರ್ಯ ರಸರಂಗ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ” ಎಂದು ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಶ್ಲಾಘಿಸಿದರು. ಉದ್ಯಮಿ ಗೋಪಿನಾಥ ವೈದ್ಯ, ಪರಿಷತ್ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ವೈದ್ಯ, ಕೃಷಿಕ ವಾದಿರಾಜ ಹತ್ವಾರ್ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ‘ಗಾಂಧಾರಿ’ ಯಕ್ಷಗಾನ ರಂಗದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು.